ಬೆಂಗಳೂರು: ಆಟದ ಮೈದಾನ ಅಕ್ರಮ ಹಂಚಿಕೆ ವಿರುದ್ಧ ಧರಣಿ
ಬೆಂಗಳೂರು, ಮೇ 13: ನಂದಿನಿ ಬಡಾವಣೆಯ ರಾಮಕೃಷ್ಣನಗರ ಮಕ್ಕಳ ಆಟದ ಮೈದಾನವನ್ನು ಅಕ್ರಮವಾಗಿ ಹಂಚಿಕೆ ಮಾಡಿರುವ ಬಿಡಿಎ, ಸಂಸದ ಬಿ.ಎನ್.ಚಂದ್ರಪ್ಪ ಹಾಗೂ ಮಹಾಲಕ್ಷ್ಮೀಪುರ ಬ್ರಾಹ್ಮಣ ಸಭಾದ ವಿರುದ್ಧ ರಾಮಕೃಷ್ಣನಗರ ಮಕ್ಕಳ ಆಟದ ಮೈದಾನ ರಕ್ಷಣಾ ಸಮಿತಿ ಧರಣಿ ನಡೆಸಿತು.
ಧರಣಿಯನ್ನುದ್ದೇಶಿಸಿ ಮಾತನಾಡಿ ಸಮಿತಿಯ ಸದಸ್ಯ ಜ್ಞಾನಮೂರ್ತಿ, ನಂದಿನಿ ಬಡಾವಣೆ- ರಾಮಕೃಷ್ಣನಗರ ರೈಲ್ವೆಮೆನ್ ಎಚ್‌ಬಿಸಿಎಸ್ ಲೇಔಟ್‌ನಲ್ಲಿರುವ ಬಿಡಿಎ ನಿವೇಶನವನ್ನು 30 ವರ್ಷಗಳಿಂದ ಮಕ್ಕಳು ಮತ್ತು ಸ್ಥಳೀಯರು ಆಟದ ಮೈದಾನವಾಗಿ ಬಳಕೆ ಮಾಡಿಕೊಂಡು ಬರುತ್ತಿದ್ದು, ಬಿಡಿಎಗೆ ಸೇರಿದ ಸೊತ್ತಿನಲ್ಲಿ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳು ಹಾಗೂ ಶಾಸಕರು, ಬಿಬಿಎಂಪಿ ಸದಸ್ಯರಗಳು ಸೇರಿ 10- 12 ವರ್ಷಗಳ ಹಿಂದೆ ಖಾಲಿ ಮೈದಾನವನ್ನು ಮಕ್ಕಳ ಆಟದ ಮೈದಾನವನ್ನಾಗಿ ಪರಿವರ್ತಿಸಿದ್ದರು ಎಂದು ತಿಳಿಸಿದರು.
ಪರಿವರ್ತಿತ ಮೈದಾನಕ್ಕೆ ತಂತಿ ಬೇಲಿಯ ತಡೆಗೋಡೆಯನ್ನು ಹಾಕಿ, ಮೈದಾನದಲ್ಲಿ ಮಕ್ಕಳ ಆಟದ ವಸ್ತುಗಳನ್ನು ಹಾಗೂ ಹೆಂಚಿನ ತಂಗುದಾಣವನ್ನು ನಿರ್ಮಿಸಿ, ಸಾರ್ವಜನಿಕರು ಕುಳಿತುಕೊಳ್ಳುವ ಆಸನಗಳನ್ನು ಹಾಕಿದ್ದರು. ಅಲ್ಲದೆ, ಸುತ್ತ ಮುತ್ತಲಿನ ಸರಕಾರಿ ಶಾಲೆಗಳು, ಸಾರ್ವಜನಿಕರು ಹಾಗೂ ಮಕ್ಕಳು ಬಳಕೆ ಮಾಡುತ್ತಿದ್ದಾರೆ. ಆದರೆ ಇತ್ತೀಚಿಗೆ ರಾಜಕಾರಣಿಗಳು ಪ್ರಭಾವ ಬಳಸಿ ಬಿಡಿಎ ವತಿಯಿಂದ ಮೂರು ಪ್ರಭಾವಿ ಸಂಘ ಸಂಸ್ಥೆಗಳಿಗೆ ಈ ಮೈದಾನವನ್ನು ಸಿಎ ನಿವೇಶನಗಳನ್ನಾಗಿ ಮಾಡಿ ಅಕ್ರಮವಾಗಿ ಹಂಚಿಕೆ ಮಾಡಿದ್ದಾರೆ. ಈ ಸಿಎ ನಿವೇಶನವನ್ನು ಬಿಬಿಎಂಪಿಯವರು ಸುಮಾರು ವರ್ಷಗಳ ಹಿಂದೆಯೇ ಸಾರ್ವಜನಿಕರ ಕಂದಾಯ ಹಣವನ್ನು ವ್ಯಯಮಾಡಿ ಮಕ್ಕಳ ಆಟದ ಮೈದಾನವನ್ನಾಗಿ ಬದಲಾಯಿಸಿದ್ದರು ಎಂದು ಹೇಳಿದರು.