ಪೊಲೀಸ್ ಸಿಬ್ಬಂದಿಗೆ ಸಿಗದ ಆರೋಗ್ಯ ತಪಾಸಣೆ ಸೌಲಭ್ಯ

Update: 2019-05-13 16:20 GMT

ಬೆಂಗಳೂರು, ಮೇ 13: ಸಾರ್ವಜನಿಕರಿಗೆ ರಕ್ಷಣೆ ನೀಡುವ, ಶಾಂತಿ ಸೌರ್ಹಾದತೆ ಕಾಪಾಡುವ ಪೊಲೀಸ್ ಸಿಬ್ಬಂದಿಗೆ ಸರಕಾರ ಹಾಗೂ ಪೊಲೀಸ್ ಇಲಾಖೆಯ ನಿರ್ಲಕ್ಷದಿಂದಾಗಿ ಪ್ರತಿವರ್ಷದಂತೆ ಕಡ್ಡಾಯವಾಗಿ ಸಿಗಬೇಕಾದ ಆರೋಗ್ಯ ತಪಾಸಣೆ ಇದುವರೆಗೂ ದಕ್ಕಿಲ್ಲ.

ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಉನ್ನತ ಅಧಿಕಾರಿಗಳನ್ನು ಬಿಟ್ಟರೆ ಕೆಳ ಹಂತದ ಅಧಿಕಾರಿ ಹಾಗೂ ಸಿಬ್ಬಂದಿಗೆ ಪ್ರತಿವರ್ಷ ರಾಜ್ಯದ ಎಲ್ಲ ಸ್ಥಳೀಯ ಜಿಲ್ಲಾ ಹಾಗೂ ಸ್ಥಳೀಯ ಗುಣಮಟ್ಟದ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಮಾಡಿಸಲಾಗುತ್ತದೆ. ಆರೋಗ್ಯ ತಪಾಸಣೆ ಪ್ರತಿ ವರ್ಷದ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳಬೇಕು. ಆದರೆ, ಈ ಸೇವೆ ಪ್ರಸಕ್ತ ವರ್ಷದಲ್ಲಿ ಕೆಲ ಪೊಲೀಸ್ ಸಿಬ್ಬಂದಿಗೆ ಅಷ್ಟೇ ಸಿಕ್ಕಿದೆ. ಉತ್ತರ ಕರ್ನಾಟಕ ಭಾಗದ ಪೊಲೀಸರಿಗೆ ಈ ಸೇವೆಯ ಕುರಿತು ಇದುವರೆಗೂ ಸಂಪೂರ್ಣ ಮಾಹಿತಿಯೂ ದಕ್ಕಿಲ್ಲ. ಅಲ್ಲದೆ, ಈ ಕುರಿತು ಅಧಿಕಾರಿಗಳ ಬಳಿ ಮಾತನಾಡಿದರೆ ನಿರ್ಲಕ್ಷದ ಮಾತುಗಳಾಡುತ್ತಿದ್ದಾರೆ ಎಂದು ಕೆಲ ಪೊಲೀಸ್ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯ : ರಾಜ್ಯ ಸರಕಾರದಿಂದ ಹಣ ಪಾವತಿಯಾಗುವುದರಿಂದ ಹೇಗೆ ತಪಾಸಣೆ ನಡೆಸಿದರೂ ಹಣ ಸಿಗುತ್ತದೆ ಎಂದು ಆಸ್ಪತ್ರೆಯ ಸಿಬ್ಬಂದಿ ಪೊಲೀಸ್ ಸಿಬ್ಬಂದಿಯನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಸಂಪೂರ್ಣ ಆರೋಗ್ಯ ತಪಾಸಣೆಗೆ ಕನಿಷ್ಠ 2,500 ರಿಂದ 4 ಸಾವಿರ ರೂ. ವರೆಗೆ ಪಾವತಿಸಬೇಕು.

ರಾಜ್ಯದಲ್ಲಿರುವ ಎಲ್ಲ ಜಿಲ್ಲೆ ಹಾಗೂ ನಗರಗಳಲ್ಲಿ ಉತ್ತಮ ಸೌಲಭ್ಯಗಳನ್ನು ಹೊಂದಿರುವ ಖಾಸಗಿ ಆಸ್ಪತ್ರೆಗಳ ಜತೆ ಸರಕಾರ ಕೆಲ ವರ್ಷಗಳ ಹಿಂದೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಓರ್ವ ಪೊಲೀಸ್ ಸಿಬ್ಬಂದಿಗೆ 1 ಸಾವಿರ ರೂ. ಆರೊಗ್ಯ ಭತ್ತೆ ರೂಪದಲ್ಲಿ ಆಯಾ ಖಾಸಗಿ ಆಸ್ಪತ್ರೆಗೆ ಪ್ರತಿ ವರ್ಷ ಹಣ ಮಂಜೂರಾಗುತ್ತದೆ. ತಮ್ಮ ಜಿಲ್ಲೆಗಳಲ್ಲಿರುವ ಸರಕಾರ ಸೂಚಿಸಿದ ಆಸ್ಪತ್ರೆಯಲ್ಲಿ ವರ್ಷಕ್ಕೊಮ್ಮೆ ಠಾಣೆಯ ಎಲ್ಲ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಕಡ್ಡಾಯವಾಗಿ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News