ಅಕ್ರಮ ನಿವೇಶನಗಳ ಹಂಚಿಕೆ: ಖಾತಾಗೆ ಬಿಡಿಎ ತಡೆ

Update: 2019-05-13 16:21 GMT

ಬೆಂಗಳೂರು, ಮೇ 13: ಅಕ್ರಮ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ನಿಗಮ(ಬಿಡಿಎ) 35 ನಿವೇಶನಗಳ ಖಾತಾಗಳನ್ನು ತಡೆಹಿಡಿದಿದೆ.

ಅಕ್ರಮ ನಿವೇಶನ ಹಂಚಿಕೆ ಪ್ರಕರಣದ ಸಂಬಂಧ ಉಪ ಕಾರ್ಯದರ್ಶಿ- 4 ಎಚ್.ಎಸ್.ಸತೀಶ್ ಬಾಬು ಆರೋಪಿಯ ಸ್ಥಾನದಲ್ಲಿದ್ದು, ಬಿಡಿಎ ನೀಡಿದ್ದ ನೋಟಿಸ್‌ಗೆ ಉತ್ತರ ನೀಡದ ಹಿನ್ನೆಲೆಯಲ್ಲಿ ನಿವೇಶನಗಳ ಖಾತಾಗಳಿಗೆ ತಡೆ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಟ್ರಿನಿಟಿ ಸಂಘಕ್ಕೆ ಅರ್ಕಾವತಿ ಬಡಾವಣೆಯಲ್ಲಿ ನೀಡಿರುವ ಬದಲಿ ಸೈಟ್‌ಗಳಿಗೆ ಕಾನೂನು ಮಾನ್ಯತೆ ಸಿಕ್ಕಿಲ್ಲ. ಅಲ್ಲದೆ, ಹೈಕೋರ್ಟ್ ಈ ಕುರಿತು ಆದೇಶ ನೀಡಿದ್ದು, ಅದರ ಅನ್ವಯ ನಿವೇಶನ ಹಂಚಿಕೆ ನಿಯಮಗಳು ಉಲ್ಲಂಘನೆಯಾಗಿದ್ದು, ಈ ನಿವೇಶನಗಳ ಖಾತಾ ತಡೆಯಲಾಗಿದೆ.

ಸರಕಾರದ ಗಮನಕ್ಕೆ ತರದೇ ಮನಬಂದಂತೆ ನಿವೇಶನಗಳನ್ನು ಹಂಚಿಕೆ ಮಾಡಲು ಸತೀಶ್ ಬಾಬುಗೆ ಯಾವುದೇ ಅಧಿಕಾರ ನೀಡಿಲ್ಲ. ಆದರೂ, ಅವರು ಹಂಚಿಕೆ ಮಾಡಿದ್ದಾರೆ. ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ ಇಬ್ಬರು ಅಧಿಕಾರಿಗಳನ್ನು ವಜಾ ಮಾಡಲಾಗಿದೆ. ಈ ಪ್ರಕರಣದ ಕುರಿತು ಬಿಡಿಎ ಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತದೆ.

ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ಈ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಅಲ್ಲದೆ, ಎಲ್ಲ ನಿವೇಶನಗಳನ್ನು ಸಂಘದ ಸದಸ್ಯರಿಗೆ ನೋಂದಣಿ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಸೂಪರಿಂಟೆಂಡೆಂಟ್ ಕೆ.ವಿ.ರವಿಶಂಕರ್ ಉಪ ಕಾರ್ಯದರ್ಶಿ ಸತೀಶ್ ಬಾಬು ಮೇಲೆ ಆರೋಪಿಸಿದ್ದರು. ಪ್ರತಿ ಚದರ ಅಡಿಗೆ 59 ರೂ.ಗಳಷ್ಟು ಅಭಿವೃದ್ಧಿ ಶುಲ್ಕವನ್ನು ಪಡೆದಿದ್ದಾರೆ. ಇದು ಪ್ರಾಧಿಕಾರಕ್ಕೆ ನಷ್ಟವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News