3ನೇ ಬಾರಿ ಮ್ಯಾಡ್ರಿಡ್ ಓಪನ್ ಪ್ರಶಸ್ತಿ ಜಯಿಸಿದ ಜೊಕೊವಿಕ್

Update: 2019-05-13 19:04 GMT

ಮ್ಯಾಡ್ರಿಡ್, ಮೇ 13: ಸ್ಟೆಫನೊಸ್ ಸಿಟ್‌ಸಿಪಾಸ್‌ರನ್ನು ನೇರ ಸೆಟ್‌ಗಳಿಂದ ಮಣಿಸಿದ ಸರ್ಬಿಯದ ಸ್ಟಾರ್ ಆಟಗಾರ ನೊವಾಕ್ ಜೊಕೊವಿಕ್ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಬಾರಿ ಪ್ರಶಸ್ತಿ ಜಯಿಸಿದ್ದಾರೆ.

ರವಿವಾರ ನಡೆದ ಪುರುಷರ ಸಿಂಗಲ್ಸ್‌ನ ಫೈನಲ್ ಪಂದ್ಯದಲ್ಲಿ ಜೊಕೊವಿಕ್ 20ರ ಹರೆಯದ ಗ್ರೀಸ್‌ಆಟಗಾರ ಸಿಟ್‌ಸಿಪಾಸ್‌ರನ್ನು 6-3, 6-4 ಸೆಟ್‌ಗಳಿಂದ ಮಣಿಸಿದರು. ಈ ಋತುವಿನಲ್ಲಿ ಎರಡನೇ ಪ್ರಶಸ್ತಿ ಜಯಿಸಿದ ಜೊಕೊವಿಕ್ 33ನೇ ಮಾಸ್ಟರ್ಸ್ 1000 ಟ್ರೋಫಿಯನ್ನು ಜಯಿಸಿ ರಫೆಲ್ ನಡಾಲ್ ದಾಖಲೆಯನ್ನು ಸರಿಗಟ್ಟಿದರು.

ಈ ವರ್ಷ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ್ದ ಜೊಕೊವಿಕ್ ಈ ಹಿಂದೆ 2016 ಹಾಗೂ 2011ರಲ್ಲಿ ಮ್ಯಾಡ್ರಿಡ್ ಓಪನ್ ಕಿರೀಟ ಧರಿಸಿದ್ದರು.

 ಮ್ಯಾಡ್ರಿಡ್ ಓಪನ್ ಸೆಮಿ ಫೈನಲ್‌ನಲ್ಲಿ ನಡಾಲ್‌ರನ್ನು ಮಣಿಸಿದ್ದ ಸಿಟ್‌ಸಿಪಾಸ್ ವಿರುದ್ಧ ಜೊಕೊವಿಕ್ ಆರಂಭದಲ್ಲೇ ಹಿಡಿತ ಸಾಧಿಸಿದರು. ಎರಡೂ ಸೆಟ್‌ನ್ನು ಸುಲಭವಾಗಿ ವಶಪಡಿಸಿಕೊಂಡ ಜೊಕೊವಿಕ್ ಒಂದೂ ಸೆಟ್ ಕೈಚೆಲ್ಲದೆ ಕ್ಲೇ ಕೋರ್ಟ್ ನಲ್ಲಿ 14ನೇ, ಒಟ್ಟಾರೆ 74ನೇ ಪ್ರಶಸ್ತಿಯನ್ನು ಜಯಿಸಿದ್ದಾರೆ. 31ರ ಹರೆಯದ ಜೊಕೊವಿಕ್ ಇದೀಗ ಅಗ್ರ-10 ಎದುರಾಳಿಯ ವಿರುದ್ಧ 200ನೇ ಗೆಲುವು ದಾಖಲಿಸಿದರು. ಆಸ್ಟ್ರೇಲಿಯನ್ ಓಪನ್ ಜಯಿಸಿದ ಬಳಿಕ ಮೊದಲಿನ ಲಯಕ್ಕೆ ಮರಳಲು ಪರದಾಡುತ್ತಿದ್ದರು. ಕ್ಲೇ-ಕೋರ್ಟ್ ಋತುವಿನ ಆರಂಭದಲ್ಲಿ ಮಾಂಟೆಕಾರ್ಲೊ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿರುವುದು ಜೊಕೊವಿಕ್‌ರ ಉತ್ತಮ ಸಾಧನೆಯಾಗಿತ್ತು.

ಡಬಲ್ಸ್ ಫೈನಲ್‌ನಲ್ಲಿ ಜಿಯಾನ್-ಜುಲಿಯೆನ್ ರೊಜೆರ್ ಹಾಗೂ ಹೊರಿಯಾ ಟೆಕಾವು ಅವರು ಡೊಮಿನಿಕ್ ಥೀಮ್ ಹಾಗೂ ಡಿಯಾಗೊ ಸ್ಚೆವರ್ಟ್ಜ್‌ಮನ್‌ರನ್ನು 6-2, 6-3 ನೇರ ಸೆಟ್‌ಗಳಿಂದ ಮಣಿಸಿದ್ದಾರೆ. ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಕಿಕಿ ಬೆರ್ಟೆನ್ಸ್ ರೊಮಾನಿಯದ ಹಾಲೆಪ್‌ರನ್ನು ಮಣಿಸಿ ಪ್ರಶಸ್ತಿ ಎತ್ತಿ ಹಿಡಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News