ಪಶ್ಚಿಮ ವಿಭಾಗದ ಪೊಲೀಸರ ಕಾರ್ಯಾಚರಣೆ: ಜಪಾನ್ ರಾಜ ಸೇರಿ 14 ಮಂದಿ ಸೆರೆ

Update: 2019-05-14 16:12 GMT

ಬೆಂಗಳೂರು, ಮೇ 14: ಪತ್ನಿಯರ ಮೂಲಕ ಕದ್ದ ಮಾಲು ಮಾರಾಟ ಮಾಡಿ ಮೋಜಿನ ಜೀವನ ನಡೆಸುತ್ತಿದ್ದ ಜಪಾನ್ ರಾಜ ಸೇರಿ 14 ಜನರನ್ನು ಬಂಧಿಸಿರುವ ಪಶ್ಚಿಮ ವಿಭಾಗದ ಪೊಲೀಸರು 60.95 ಲಕ್ಷ ರೂ. ಮೌಲ್ಯದ ಮಾಲು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಫೆ.16 ರಂದು ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ ಚಿಕ್ಕಬಿದರಕಲ್ಲಿನ ರಾಜ ಯಾನೆ ಜಪಾನ್ ರಾಜ, ಬೀಗ ಹಾಕಿದ ಮನೆಗಳನ್ನು ಗುರುತಿಸಿ, ಕನ್ನಗಳವು ಮಾಡಿದ್ದ 13 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ ಎಂದು ಮಾಹಿತಿ ನೀಡಿದರು.

ಆರೋಪಿಯು ಕೊಯಮತ್ತೂರು ಮೂಲದ ಮಹಿಳೆಯರಿಬ್ಬರನ್ನು ವಿವಾಹವಾಗಿ ಕಳವು ಮಾಡಿದ ಚಿನ್ನ, ಬೆಳ್ಳಿ ಆಭರಣಗಳನ್ನು ಅವರ ಮೂಲಕ ಮಾರಾಟ ಮಾಡಿಸುವ ಮೂಲಕ ಮೋಜಿನ ಜೀವನ ನಡೆಸುತ್ತಿದ್ದನು. ಅಷ್ಟೇ ಅಲ್ಲದೆ, ಇಬ್ಬರು ಸಹಚರರ ಜೊತೆ ಸೇರಿ ಕೃತ್ಯ ಎಸಗುತ್ತಿದ್ದ ಎಂದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಈ ಹಿಂದೆ ಜಪಾನ್ ರಾಜನನ್ನು 2018ರ ಡಿಸೆಂಬರ್‌ನಲ್ಲಿ ಬಂಧಿಸಿ, ಜೈಲಿಗೆ ಕಳುಸಿದ್ದರು. ಆಗ ಈತ ಕನ್ನಗಳವು ಮಾಡಿದ್ದ 42 ಪ್ರಕರಣಗಳನ್ನು ಪತ್ತೆಹಚ್ಚಿ 1 ಕೋಟಿ 2 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಸುನೀಲ್ ಕುಮಾರ್ ಹೇಳಿದರು.

ಇಬ್ಬರ ಸೆರೆ: ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಬ್ಬಿಣದ ರಾಡ್‌ನಿಂದ ಬೀಗ ಮುರಿದು ಕನ್ನಗಳವು ಮಾಡುತ್ತಿದ್ದ ಭುವನೇಶ್ವರಿ ನಗರದ ಗೋಪಿ (43), ಡೇವಿಡ್ (34) ಎಂಬುವರನ್ನು ಬಂಧಿಸಲಾಗಿದೆ.

ಆರೋಪಿಗಳು ಮರಿಯಪ್ಪನಪಾಳ್ಯದ 10ನೇ ಮುಖ್ಯರಸ್ತೆಯ ವೆಂಕಟೇಶ್ ಎನ್ನುವವರ ಮನೆಗೆ ಹಾಡುಹಗಲೇ ಬೀಗ ಮುರಿದು ನುಗ್ಗಿ ಚಿನ್ನ, ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಕಾರ್ಯಾಚರಣೆ ನಡೆಸಿ ಬಂಧಿಸಿ, ತನಿಖೆ ಮುಂದುವರೆಸಲಾಗಿದೆ.

ಸಹೋದರರ ಬಂಧನ: ಕೆಲಸ ಮಾಡುವ ಅಂಗಡಿಯಲ್ಲೇ ಕಳವು ಮಾಡಿದ್ದ ಮಂಜುನಾಥನಗರದ ಸೆಂದಿಲ್ ಕುಮಾರ್ (42) ಹಾಗೂ ಶ್ರೀಧರ್ (38) ಎಂಬುವರನ್ನು ಬಂಧಿಸಿ, 7 ಲಕ್ಷ 20 ಸಾವಿರ ರೂ. ಮೌಲ್ಯದ 17ಕೆಜಿ 700 ಗ್ರಾಂ ತೂಕದ ಬೆಳ್ಳಿ ಜಪ್ತಿ ಮಾಡಲಾಗಿದೆ.

ಆರೋಪಿಗಳು ಮಾಗಡಿ ರಸ್ತೆಯ ಮಂಜುನಾಥನಗರದ ಅಶೋಕ್ ಕುಮಾರ್ ಅವರು ನಡೆಸುತ್ತಿದ್ದ ಸಿಲ್ವರ್ ಟೆಸ್ಟಿಂಗ್ ಲ್ಯಾಬ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ಕೆಲಸ ಮಾಡುವ ಸ್ಥಳದಲ್ಲಿಯೇ ಬೆಳ್ಳಿಯನ್ನು ಕಳವು ಮಾಡಿ ಪರಾರಿಯಾಗಿದ್ದರು. ಖಚಿತ ಮಾಹಿತಿಯ ಮೇರೆಗೆ ಆರೋಪಿಗಳನ್ನು ಕೆಪಿ ಅಗ್ರಹಾರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಎಂಟಿಸಿ ಕಳ್ಳರು: ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಸಂಚರಿಸುತ್ತಾ ನಗದು, ಚಿನ್ನಾಭರಣ, ಇನ್ನಿತರ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದ ಆರೋಪದಡಿ ಭದ್ರಾವತಿಯ ಸತ್ಯಸಾಯಿ ನಗರದ ಚಾಂದ್ ಪಾಷಾ ಹಾಗೂ ಅಕ್ರಂ ಎಂಬುವರನ್ನು ಬಂಧಿಸಿ, 15 ಲಕ್ಷ 10 ಸಾವಿರ ರೂ. ಮೌಲ್ಯದ 503 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಇವರ ಬಂಧನದಿಂದ 9 ಕಳವು ಪ್ರಕರಣಗಳು ಪತ್ತೆಯಾಗಿವೆ.

ಅದೇ ರೀತಿ, ಮನೆಗಳವು ಮಾಡುತ್ತಿದ್ದ 7 ಮಂದಿಯನ್ನು ಇಲ್ಲಿನ ಉಪ್ಪಾರಪೇಟೆ ಠಾಣಾ ಪೊಲೀಸರು ಬಂಧಿಸಿ, 3 ಲಕ್ಷ 35 ಸಾವಿರ ರೂ. ಮೌಲ್ಯದ ನಗದು, ಇನ್ನಿತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಹೊಳೆನರಸಿಪುರದ ವಿಶ್ವನಾಥ್ (23), ತುಮಕೂರಿನ ಝಬಿವುಲ್ಲಾ (28), ಭದ್ರಾವತಿಯ ಶ್ರೀನಿವಾಸ್ (34), ಕುಮಾರ (34), ಹೆಬ್ಬಗೋಡಿಯ ಹರೀಶ್ (29), ಮೈಸೂರಿನ ರಾಘವೇಂದ್ರ (39), ನಾಯಂಡನಹಳ್ಳಿಯ ಅಸ್ಲಾಂ(39) ಬಂಧಿತ ಆರೋಪಿಗಳು ಎಂದು ಸುನೀಲ್‌ಕುಮಾರ್ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಕೆ.ಸಿಂಗ್, ಡಿಸಿಪಿ ರವಿ ಡಿ.ಚನ್ನಣ್ಣನವರ್ ಉಪಸ್ಥಿತರಿದ್ದರು.

1 ಲಕ್ಷ ಬಹುಮಾನ

14 ಮಂದಿ ಆರೋಪಿಗಳನ್ನು ಬಂಧಿಸಿ, 34 ಪ್ರಕರಣಗಳನ್ನು ಪತ್ತೆಹಚ್ಚಿರುವ ಪಶ್ಚಿಮ ವಿಭಾಗದ ಪೊಲೀಸರಿಗೆ 1 ಲಕ್ಷ ನಗದು ಬಹುಮಾನವನ್ನು ನಗರದ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News