ವಶೀಕರಣ ನೆಪದಲ್ಲಿ ವಂಚನೆ ಆರೋಪ: ನಕಲಿ ಸ್ವಾಮೀಜಿ ಸೆರೆ

Update: 2019-05-14 16:12 GMT

ಬೆಂಗಳೂರು, ಮೇ 14: ವಶೀಕರಣ ನೆಪದಲ್ಲಿ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ನಗದು ಪಡೆದು, ವಂಚನೆ ಮಾಡುತ್ತಿದ್ದ ಸ್ವಾಮೀಜಿಯೋರ್ವನನ್ನು ಇಲ್ಲಿನ ಎಚ್‌ಎಎಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಹೊಸದಿಲ್ಲಿ ಮೂಲದ ರಜವಂತ್ ಸಿಂಗ್(40) ಬಂಧಿತ ಅರೋಪಿ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.

ಕಳೆದ 2018ರ ಮೇ 10 ರಂದು ಮನೆಯೊಂದಕ್ಕೆ ನುಗ್ಗಿದ ಆರೋಪಿ ರಜವಂತ್ ಸಿಂಗ್, ಪವಿತ್ರ ಗುರುದ್ವಾರದ ಹೆಸರಲ್ಲಿ ಚಂದಾ ಪಡೆಯಲು ಬಂದಿದ್ದೇವೆ ಎಂದು ಮಹಿಳೆಯನ್ನು ನಂಬಿಸಿದ್ದ. ಬಳಿಕ, ನಿಮ್ಮ ಮನೆಯಲ್ಲಿ ಶನಿ ದೋಷ ಇದೆ, ನಿವಾರಿಸಿಕೊಡಲಾಗುವುದು ಎಂದೆಲ್ಲಾ ಹೇಳಿ, 34 ಸಾವಿರ ರೂ. ನಗದು ಪಡೆದು ಪರಾರಿಯಾಗಿದ್ದ. ಈ ಸಂಬಂಧ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸೋಮವಾರ ಠಾಣೆಯ ಸಿಬ್ಬಂದಿಗಳಾದ ಮಂಜೇಶ್ ಮತ್ತು ರವಿ ಎಂಬುವರು ಆರೋಪಿ ರಜವಂತ್ ಸಿಂಗ್‌ನನ್ನು ಶಂಕೆಯ ಮೇಲೆ ವಶಕ್ಕೆ ಪಡೆದು, ವಿಚಾರಣೆ ಗೊಳಪಡಿಸಿದಾಗ, ಮಹಿಳೆಯನ್ನು ವಂಚಿರುವ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅಬ್ದುಲ್ ಅಹದ್ ಮಾಹಿತಿ ನೀಡಿದರು.

ಗುರು ನಾನಕ್ ಫೋಟೋ ಇಟ್ಟುಕೊಂಡಿದ್ದ ಆರೋಪಿ ರಜವಂತ್ ಸಿಂಗ್, ಗುರುದ್ವಾರದ ಪವಿತ್ರ ಜಪಮಣಿಗಳನ್ನು ನೀಡುವೆ, ಅದನ್ನು ಇಟ್ಟು ಪೂಜೆ ಮಾಡಿ ಎಂದು ಜನರಿಗೆ ನಂಬಿಸುತ್ತಿದ್ದ. ಅಷ್ಟೇ ಅಲ್ಲದೆ, ಕೆಲವರನ್ನು ಮಾನಸಿಕವಾಗಿ ದೌರ್ಬಲ್ಯಗೊಳಿಸಿ, ಸಮಸ್ಯೆ ಇದೆ ಎಂದೆಲ್ಲಾ ಹೇಳಿ, ಅವರಿಂದ ನಗದು, ಚಿನ್ನಾಭರಣ ಪಡೆದುಕೊಳ್ಳುತ್ತಿದ್ದ ಎನ್ನುವ ಆರೋಪಗಳು ಕೇಳಿಬಂದಿದ್ದು, ಈ ಸಂಬಂಧ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News