ಮಹಿಳೆಯರಲ್ಲಿ ಹೃದ್ರೋಗಕ್ಕೆ ಗುರಿಯಾಗುವ ಅಪಾಯ ಹೆಚ್ಚು

Update: 2019-05-14 16:15 GMT

ಹೃದ್ರೋಗಗಳು ವಿಶೇಷವಾಗಿ ಪುರುಷರಿಗೇ ಮೀಸಲಾಗಿರುವ ಕಾಯಿಲೆಗಳು ಎಂಬ ಸಾಮಾನ್ಯ ನಂಬಿಕೆಗೆ ವ್ಯತಿರಿಕ್ತವಾಗಿ ಋತುಬಂಧಗೊಂಡ ಅಥವಾ ಮುಟ್ಟು ನಿಂತ ಮಹಿಳೆಯರು ಹೃದಯಾಘಾತಗಳ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ. ಅಲ್ಲದೆ ಋತುಬಂಧಗೊಂಡ ಮಹಿಳೆಯರಲ್ಲಿ ಹೃದಯಾಘಾತಗಳು ಭಾರತದಲ್ಲಿ ಸ್ತನ ಕ್ಯಾನ್ಸರ್‌ಗಿಂತ ಹೆಚ್ಚಿನ ಜೀವಗಳನ್ನು ಬಲಿ ಪಡೆದಿವೆ ಎಂದು ಅಂದಾಜಿಸಲಾಗಿದೆ.

ಮುಟ್ಟು ನಿಂತ ಮಹಿಳೆಯರಲ್ಲಿ ಹೃದಯಾಘಾತದ ಘಟನೆಗಳು ಹೆಚ್ಚುತ್ತಿವೆ, ಆದರೆ ಸಣ್ಣ ಪ್ರಾಯದ ಮಹಿಳೆಯರಲ್ಲೂ ಹೃದಯಾಘಾತಗಳು ಹೆಚ್ಚುತ್ತಿವೆ. ಹೃದಯದ ಮುಖ್ಯ ಅಪಧಮನಿಗಳ ಪೈಕಿ ಯಾವುದಾದರಲ್ಲೂ ಒಂದರಲ್ಲಿ ತಡೆಯುಂಟಾದರೂ ಹೃದಯದ ಸ್ನಾಯು ಸಾಯಲು ಕಾರಣವಾಗುತ್ತದೆ ಮತ್ತು ಹೃದಯಾಘಾತ ಸಂಭವಿಸುತ್ತದೆ. ಅಪಧಮನಿಗಳಲ್ಲಿ ಸಂಗ್ರಹಗೊಂಡ ಕೊಲೆಸ್ಟ್ರಾಲ್ ತೆರೆದುಕೊಳ್ಳಬಹುದು ಮತ್ತು ರಕ್ತವು ಹೆಪ್ಪುಗಟ್ಟಿ ಅದರ ಸುಗಮ ಸಂಚಾರಕ್ಕೆ ತಡೆಯನ್ನುಂಟು ಮಾಡುತ್ತದೆ.ಮಹಿಳೆಯರಲ್ಲಿ ಮುಖ್ಯ ಅಪಧಮನಿಗಳಲ್ಲಿ ಮಾತ್ರವಲ್ಲ,ಹೃದಯದ ಸಣ್ಣ ರಕ್ತನಾಳಗಳಲ್ಲಿಯೂ ತಡೆಯುಂಟಾಗುತ್ತದೆ. ಇದನ್ನು ಕೊರೊನರಿ ಮೈಕ್ರೋವಾಸ್ಕುಲರ್ ಡಿಸೀಸ್(ಸಿಎಂಡಿ) ಎಂದು ಕರೆಯಲಾಗುತ್ತದೆ.

  ಹೃದಯಾಘಾತವು ಸಾಮಾನ್ಯವಾಗಿ 15 ನಿಮಿಷಗಳಿಗೂ ಹೆಚ್ಚು ಕಾಲ ಎದೆನೋವನ್ನುಂಟು ಮಾಡುತ್ತದೆ,ಆದರೆ ಅದು ಯಾವುದೇ ಲಕ್ಷಣಗಳನ್ನು ತೋರಿಸದಿರಲೂಬಹುದು. ಎದೆನೋವಿಗೆ ಹೊರತಾದ ಅಜೀರ್ಣ, ನಿರಂತರ ಕುತ್ತಿಗೆ ನೋವು ಅಥವಾ ದವಡೆ ನೋವಿನಂತಹ ಇತರ ಲಕ್ಷಣಗಳ ಬಗ್ಗೆಯೂ ತಿಳಿದಿರುವುದು ಮುಖ್ಯವಾಗಿದೆ,ಆದರೆ ಹೆಚ್ಚಿನ ಜನರಲ್ಲಿ ಇಂತಹ ಎಚ್ಚರಿಕೆಯ ಸಂಕೇತಗಳು ಗಂಟೆಗಳು,ದಿನಗಳು ಅಥವಾ ವಾರಗಳ ಮೊದಲೇ ಪ್ರಕಟಗೊಳ್ಳುತ್ತವೆ. ಮಹಿಳೆಯರಲ್ಲಿ ಹೆಚ್ಚು ಸ್ಪಷ್ಟವಾದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಕಡಿಮೆಯಿರುತ್ತವೆ. ಎದೆಯ ಮಧ್ಯದಲ್ಲಿ ಅಹಿತಕರ ಒತ್ತಡ, ಹಿಂಡುವಿಕೆಯಂತಹ ಲಕ್ಷಣಗಳಿರಬಹುದು ಮತ್ತು ಇದು ಒಂದು ಅಥವಾ ಎರಡೂ ತೋಳುಗಳು,ಬೆನ್ನು,ಕುತ್ತಿಗೆ,ದವಡೆ ಮತ್ತು ಉದರಕ್ಕೂ ವ್ಯಾಪಿಸಬಹುದು. ಇದರ ಜೊತೆಗೆ ಉಸಿರಾಟದ ತೊಂದರೆ,ನಿಶ್ಶಕ್ತಿ,ದಣಿವು,ತಣ್ಣನೆಯ ಬೆವರು,ಚಡಪಡಿಕೆ,ಅಜೀರ್ಣದಂತಹ ಲಕ್ಷಣಗಳೂ ಇರಬಹುದು.

 ಕೆಲವೊಮ್ಮೆ ಹೃದಯಾಘಾತವು ಸಂಭವಿಸಿದಾಗ ಅದನ್ನು ಗುರುತಿಸುವುದು ಕಠಿಣವಾಗುತ್ತದೆ. ಏನೋ ಆಗುತ್ತಿದೆ ಎನ್ನುವುದು ನಿಮಗೆ ಗೊತ್ತಾಗುತ್ತದೆ,ಆದರೆ ಅದೇನು ಎಂದು ಸ್ಪಷ್ಟವಾಗಿ ಚಿಂತಿಸಲು ಸಾಧ್ಯವಾಗುವುದಿಲ್ಲ. ಈ ಅಹಿತಕರ ಅನುಭವ ಕೆಲಹೊತ್ತಿನ ಬಳಿಕ ಮಾಯವಾಗಬಹುದು ಮತ್ತು ದಿಢೀರ್‌ನೆ ಮೊದಲಿಗಿಂತ ಹೆಚ್ಚು ತೀವ್ರತೆಯೊಂದಿಗೆ ಕಾಣಿಸಿಕೊಳ್ಳಬಹುದು. ಮಧುಮೇಹಿಗಳು ಮತ್ತು ವಯಸ್ಸಾದವರಲ್ಲಿ ಎದೆನೋವು ಕೂಡ ಕಾಣಿಸಿಕೊಳ್ಳದೆ ಹೃದಯಾಘಾತವಾಗಬಹುದು. ದುರಂತವೆಂದರೆ ಮಹಿಳೆಯರು ತಮ್ಮಲ್ಲಿ ಹೃದಯಾಘತದ ಲಕ್ಷಣಗಳು ಕಂಡು ಬಂದರೂ ಅವುಗಳನ್ನು ಕಡೆಗಣಿಸುವುದೇ ಹೆಚ್ಚು.

ಎಲ್ಲ ವಯೋಗುಂಪಿನ ಜನರು ಹೃದಯಾಘಾತಕ್ಕೆ ಬಲಿಯಾಗುತ್ತರಾದರೂ ಮಹಿಳೆಯರು ತಮ್ಮ ಹೃದಯದ ಆರೋಗ್ಯದ ಬಗ್ಗೆ ಗಂಭೀರ ಕಾಳಜಿಯನ್ನು ವಹಿಸಬೇಕು. ಅಧಿಕ ರಕ್ತದೊತ್ತಡ,ಅಧಿಕ ಕೊಲೆಸ್ಟ್ರಾಲ್, ಮಧುಮೇಹ, ಬೊಜ್ಜು, ಮಾನಸಿಕ ಒತ್ತಡ,ಖಿನ್ನತೆ,ಧೂಮ್ರಪಾನ,ಜಡತ್ವ ಮತ್ತು ಋತುಬಂಧ ಇವು ಹೃದಯ ಸಮಸ್ಯೆಗಳೊಂದಿಗೆ ಗುರುತಿಸಿಕೊಂಡಿರುವ ಅಪಾಯದ ಅಂಶಗಳಾಗಿವೆ. ಅಧಿಕ ರಕ್ತದೊತ್ತಡ ಅಥವಾ ಮಧುಮೇಹದಂತಹ ಗರ್ಭಾವಸ್ಥೆಯ ಸಮಸ್ಯೆಗಳು ಹಾಗೂ ರುಮಟಾಯ್ಡೆ ಸಂಧಿವಾತ ಮತ್ತು ಚರ್ಮಕ್ಷಯದಂತಹ ಉರಿಯೂತ ಕಾಯಿಲೆಗಳು ಹೃದ್ರೋಗಕ್ಕೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತವೆ. ಸ್ತನ ಕ್ಯಾನ್ಸರ್‌ನ್ನು ಗುಣಪಡಿಸಲು ಬಳಕೆಯಾಗುವ ವಿಕಿರಣ ಚಿಕಿತ್ಸೆ ಮತ್ತು ಕಿಮೊಥೆರಪಿಗಳು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತವೆ. ಕುಟುಂಬದಲ್ಲಿ ಹೃದಯರೋಗಗಳ ಇತಿಹಾಸವಿರುವವರು ಅಪಾಯದ ಅಂಶಗಳತ್ತ ಹೆಚ್ಚಿನ ನಿಗಾಯಿರಿಸಬೇಕಾಗುತ್ತದೆ.

 ಹೃದಯಾಘಾತದಿಂದ ನರಳುತ್ತಿರುವ ಮಹಿಳೆಯರು ನೆರವು ಕೇಳಲು ಮತ್ತು ಆಸ್ಪತ್ರೆಗೆ ತೆರಳಲು ಪುರುಷರಿಗಿಂತ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಾರೆ. ಎದೆಯಲ್ಲಿ ಯಾವುದೇ ಅಹಿತಕರ ಅನುಭವವುಂಟಾದರೆ ಅದು ಗಂಭಿರವೇ ಅಲ್ಲವೇ ಎನ್ನುವುದು ನಿಮಗೆ ಗೊತ್ತಿಲ್ಲದಿದ್ದರೂ ತಕ್ಷಣವೇ ವೈದ್ಯರ ನೆರವು ಪಡೆಯುವುದು ಅತ್ಯಂತ ಮುಖ್ಯವಾಗುತ್ತದೆ.

 ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಮಾನ ಪ್ರಾಬಲ್ಯ ಹೊಂದುತ್ತಿದ್ದರೂ ಅವರು ತಮ್ಮ ಕುಟುಂಬದ ಯೋಗಕ್ಷೇಮದ ಹೊಣೆಗಾರಿಕೆಯನ್ನೂ ಹೊಂದಿರುತ್ತಾರೆ ಮತ್ತು ಇದು ಹೆಚ್ಚಿನ ಸಂದರ್ಭಗಳಲ್ಲಿ ಅವರು ತಮ್ಮ ಸ್ವಂತದ ಕಾಳಜಿಯನ್ನು ಕಡೆಗಣಿಸಲು ಕಾರಣವಾಗುತ್ತದೆ. ಅವರು ಆರೋಗ್ಯದ ಕುರಿತ ತಮ್ಮ ನಿಲುವನ್ನು ಬದಲಿಸಿಕೊಳ್ಳುವುದು ಮತ್ತು ಸ್ವಂತದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ. ಆರೋಗ್ಯಕರ ಜೀವನಶೈಲಿಯ ಅಳವಡಿಕೆ, ಆರೋಗ್ಯಪೂರ್ಣ ಆಹಾರ ಸೇವನೆ,ನಿಯಮಿತ ವ್ಯಾಯಾಮ,ದೇಹತೂಕದ ಮೇಲೆ ನಿಯಂತ್ರಣ ಮತ್ತು ಶರೀರದ ಕ್ಷಮತೆ ಕಾಯ್ದುಕೊಳ್ಳುವುದು,ಕನಿಷ್ಠ ಇಷ್ಟನ್ನಾದರೂ ಮಹಿಳೆಯರು ಅನುಸರಿಸಬೇಕು. ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಸಮಸ್ಯೆಗಳಿದ್ದರೆ ನಿಯಮಿತವಾಗಿ ಔಷಧಿಗಳನ್ನು ಸೇವಿಸುವ ಮತ್ತು ಸೂಕ್ತ ಆಹಾರಕ್ರಮವನ್ನು ಪಾಲಿಸುವ ಮೂಲಕ ನಿಯಂತ್ರಣದಲ್ಲಿಡಬೇಕು ಎನ್ನುತ್ತಾರೆ ತಜ್ಞರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News