ಮುಖ್ಯಮಂತ್ರಿ ಚರ್ಚೆ ಅಪ್ರಸ್ತುತ: ಮಾಜಿ ಸಿಎಂ ಸಿದ್ದರಾಮಯ್ಯ

Update: 2019-05-14 16:37 GMT

ಬೆಂಗಳೂರು, ಮೇ 14: ‘ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರು ಇದ್ದಾರೆ. ಈಗ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆ ಅಪ್ರಸ್ತುತ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸರಣಿ ಟ್ವಿಟ್ ಮಾಡಿರುವ ಅವರು, ಸಭೆ, ಸಮಾರಂಭಗಳಲ್ಲಿ ಜನರು ನೀವೇ ನಮ್ಮ ಮುಂದಿನ ಸಿಎಂ ಎಂದು ಕೂಗುತ್ತಾರೆ. ಆಗ ಮತ್ತೆ ತಾವೆಲ್ಲ ನಮ್ಮ ಪಕ್ಷಕ್ಕೆ ಬಹುಮತ ನೀಡಿದರೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಅವರಿಗೆ ಹೇಳಿದ್ದೇನೆ. ಅಭಿಮಾನದಿಂದ ನೀವು ಮುಖ್ಯಮಂತ್ರಿಯಾಗಿ ಎಂದು ಹೇಳುವವರ ಬಾಯಿ ಮುಚ್ಚಿಸಲಾಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.

‘ನನ್ನ ಯಾವ ಕಾರ್ಯಕ್ರಮವೂ ಜನಪ್ರಿಯತೆಗಾಗಿ, ಇಲ್ಲವೆ ತಾತ್ಕಾಲಿಕ ಅಲ್ಲ. ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಕೃಷಿಭಾಗ್ಯ, ಪಶುಭಾಗ್ಯ... ಇವುಗಳನ್ನು ಯಾವುದೇ ಸರಕಾರ ನಿಲ್ಲಿಸಲಿ ನೋಡೋಣ. ಜಾಗೃತ ಮತದಾರರು ಇರುವವರೆಗೆ ಇವೆಲ್ಲ ಶಾಶ್ವತ ಕಾರ್ಯಕ್ರಮಗಳು. ಟೀಕಾಕಾರರಿಗೆ ನೆನಪಿರಲಿ’ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

‘ಗೆಳೆಯ ಜಿ.ಟಿ.ದೇವೇಗೌಡರು ಇತ್ತೀಚೆಗೆ ನನ್ನ ವಿರುದ್ಧ ಮಾತನಾಡಿಲ್ಲ ನಿಜ. ಆದರೆ, ಮೈಸೂರಲ್ಲಿ ಜೆಡಿಎಸ್‌ನವರು ಬಿಜೆಪಿಗೆ ಮತ ಹಾಕಿದ್ದಾರೆಂಬ ಅವರ ಹೇಳಿಕೆ ಸತ್ಯವಾಗಿದ್ದರೂ ಅನಗತ್ಯವಾಗಿತ್ತು. ಇದರಿಂದಾಗಿ ಕೆರಳಿದ ನಮ್ಮ ಕಾರ್ಯಕರ್ತರು ಜೆಡಿಎಸ್ ವಿರುದ್ಧ ಮಾತನಾಡತೊಡಗಿದ್ದರು. ಮೈತ್ರಿಕೂಟದಲ್ಲಿ ಇಂತಹದನ್ನು ಮಾಡಬಾರದು’ ಎಂದು ಸಚಿವ ದೇವೇಗೌಡ ಹೇಳಿಕೆಗೆ ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

‘ರಾಜ್ಯದಲ್ಲಿ ಬಿಜೆಪಿಗೆ 104 ಸೀಟು ಬಂದಾಗ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿ, ಆ ನಂತರ ಮೂರೆ ದಿನಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಷ್ಟಾದರೂ ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಹಲವು ಬಾರಿ ಹೇಳಿದ್ದಾರೆ. ಈಗೀಗ ಯಡಿಯೂರಪ್ಪಮುಖ್ಯಮಂತ್ರಿ ಆಗುತ್ತೇನೆ ಎಂದ ತಕ್ಷಣ ಜನ ನಗಲು ಆರಂಭ ಮಾಡಿದ್ದಾರೆ’

-ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News