ವಿದ್ಯುತ್ ಸಮಸ್ಯೆ: ಒಂದೇ ದಿನ ಬೆಸ್ಕಾಂಗೆ 11 ಸಾವಿರ ದೂರು ಸಲ್ಲಿಕೆ

Update: 2019-05-14 16:45 GMT

ಬೆಂಗಳೂರು, ಮೇ 14: ಮಳೆಯ ಅವಾಂತರ ಸೇರಿದಂತೆ ನಾನಾ ಕಾರಣಗಳಿಂದಾಗಿ ಬೆಂಗಳೂರಿನ ವಿವಿಧ ಭಾಗಗಳಿಂದ ವಿದ್ಯುತ್ ಸಮಸ್ಯೆಗೆ ಸಂಬಂಧಿಸಿದಂತೆ ಒಂದೆ ದಿನದಲ್ಲಿ ಗ್ರಾಹಕರು ಬೆಸ್ಕಾಂಗೆ 11 ಸಾವಿರಕ್ಕೂ ಹೆಚ್ಚು ದೂರುಗಳು ಸಲ್ಲಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಕಳೆದ ರವಿವಾರ(ಮೇ 12) ಒಂದೇ ದಿನದಲ್ಲಿ ಬೆಂಗಳೂರು ಜನತೆಯಿಂದ ಬೆಸ್ಕಾಂಗೆ 11,180 ದೂರುಗಳು ಬಂಂದಿವೆ. ಜಯನಗರ, ಶಾಂತಿನಗರ, ಎಸ್‌ಆರ್‌ನಗರ, ವಿಲ್ಸನ್ ಗಾರ್ಡನ್, ಎಸ್‌ಜಿ ಪಾಳ್ಯ, ಬಿಟಿಎಂ ಲೇಔಟ್, ದೊಮ್ಮಲೂರು, ಮಾರತ್ತಹಳ್ಳಿ, ಆಸ್ಟಿನ್ ಟೌನ್, ಇಂದಿರಾನಗರ, ಭಾರತಿನಗರ, ಕೋರಮಂಗಲ, ಮುರುಗೇಶಪಾಳ್ಯ, ಹೊಸಕೋಟೆ, ರಾಮಮೂರ್ತಿ ನಗರ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ಜನತೆ ಸಾಕಷ್ಟು ಸಮಸ್ಯೆ ಎದುರಿಸುವಂತಾಯಿತು.

ಸೋಮವಾರವೂ ಸುರಿದ ಮಳೆಯಿಂದಾಗಿ ನಗರದ ಅನೇಕ ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿತ್ತು. ರಾತ್ರಿ ಸಮಯದಲ್ಲಿ ಕರೆಂಟ್ ಇಲ್ಲದೆ ಜನರು ಪರದಾಡುವಂತಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸಾವಿರಾರು ದೂರುಗಳು ಬಂದಿವೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರು ನಗರದಲ್ಲಿ ಮಳೆ ಬಂದರೆ ಮರ ಉರುಳುವುದು ಖಾಯಂ ಆಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಕೆಲವೊಂದು ಭಾಗಗಳಲ್ಲಿ ವಿದ್ಯುತ್ ಸ್ಥಗಿತಗೊಳಿಸುತ್ತೇವೆ. ಇನ್ನು ಕೆಲವು ಭಾಗಗಳಲ್ಲಿ ಮರ ಬಿದ್ದು ತಾನಾಗಿಯೆ ವಿದ್ಯುತ್ ಸ್ಥಗಿತವಾಗುತ್ತದೆ. ಹೀಗಾಗಿ ಇದೆಲ್ಲವನ್ನು ಸರಿ ಪಡಿಸುವುದು ಸವಾಲಿನ ಕೆಲಸವಾದರೂ ಈ ಸಂಬಂಧ ಬಿಬಿಎಂಪಿ ಜೊತೆ ನಿಕಟ ಸಂಪರ್ಕದಲ್ಲಿದ್ದು ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.

-ಬೆಸ್ಕಾಂ ಅಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News