ಪರಿಶಿಷ್ಟರ ಮುಂಭಡ್ತಿ: ಸುಪ್ರೀಂ ಕೋರ್ಟ್ ತೀರ್ಪು ಯಥಾವತ್ ಜಾರಿಗೆ ಎಸ್ಸಿ-ಎಸ್ಟಿ ನೌಕರರ ಮನವಿ

Update: 2019-05-14 16:50 GMT

ಬೆಂಗಳೂರು, ಮೇ 14: ಪರಿಶಿಷ್ಟ ನೌಕರರ ಭಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದು, ತೀರ್ಪಿನ ಯಥಾವತ್ ಜಾರಿಗೆ ಸರಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಆಗ್ರಹಿಸಿದೆ.

ಮಂಗಳವಾರ ಸಮಿತಿ ಅಧ್ಯಕ್ಷ ಡಿ.ಶಿವಶಂಕರ್ ನೇತೃತ್ವದ ನಿಯೋಗ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಅವರಿಗೆ ಮನವಿ ಸಲ್ಲಿಸಿದ್ದು, ಈ ಹಿಂದೆ ಹಿಂಭಡ್ತಿ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕು. ಅಲ್ಲದೆ, ಎಲ್ಲ ಇಲಾಖೆಗಳ ಜೇಷ್ಠತಾ ಪಟ್ಟಿಯನ್ನು ಪುನರ್ ಅವಲೋಕಿಸಬೇಕು ಎಂದು ಒತ್ತಾಯಿಸಿದೆ.

ಈ ಹಿಂದೆ ಸುಪ್ರೀಂ ಕೋರ್ಟ್ ಆದೇಶದನ್ವಯ ಹಿಂಭಡ್ತಿಯಾದ ನೌಕರರಿಗೆ ಈ ಹಿಂದೆ ಅವರಿದ್ದ ಹುದ್ದೆ ಮತ್ತು ಅದೇ ಸ್ಥಳಗಳಿಗೆ ಪುನರ್ ನಿಯೋಜಿಸಿ ಆದೇಶ ಹೊರಡಿಸಬೇಕು. ಪರಿಶಿಷ್ಟ ನೌಕರರ ಭಡ್ತಿ ಮೀಸಲಾತಿ ಕಾಯ್ದೆಯನ್ನು ತಿರುಚಿ ಆದೇಶ ಹೊರಡಿಸಿದ ಅಧಿಕಾರಿಗಳಿಗೆ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಕರ್ತವ್ಯ ಲೋಪದಡಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಇದೆ ವೇಳೆ ವಿಧಾನಸೌಧ ಮತ್ತು ವಿಕಾಸಸೌಧದ ನಡುವಿನ ಗಾಂಧಿ ಪುತ್ಥಳಿಯ ಬಳಿ ಧರಣಿ ಸತ್ಯಾಗ್ರಹ ನಡೆಸಿದ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಸದಸ್ಯರು, ಸಿಎಸ್‌ಗೆ ಮನವಿ ಸಲ್ಲಿಸಿದರು. ಈ ವೇಳೆ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ವಿಜಯಕುಮಾರ್, ಸಲಹೆಗಾರ ಚಂದ್ರಶೇಖಯ್ಯ, ಮೋಹನ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News