ಅಡ್ವಾಣಿ ಕಣ್ಣುಗಳಲ್ಲಿ ನೀರು ತುಂಬಿತ್ತು, ಆದರೆ ಅವರು ನನ್ನನ್ನು ತಡೆಯಲಿಲ್ಲ: ಶತ್ರುಘ್ನ ಸಿನ್ಹಾ

Update: 2019-05-15 12:29 GMT

ಪಾಟ್ನಾ, ಮೇ 15: ತಾನು ಸರಿಯಾದ ದಿಕ್ಕಿನಲ್ಲಿ ಹಾಗೂ ಉತ್ತಮವಾದ ದಿಕ್ಕಿನಲ್ಲಿ ಸಾಗುತ್ತಿರುವುದಾಗಿ ಹಾಗೂ ಈ ನಿಟ್ಟಿನಲ್ಲಿ ತನಗೆ ಬಿಜೆಪಿಯ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಅವರ ಆಶೀರ್ವಾದವಿದೆ ಎಂದು ಬಿಜೆಪಿ ಜತೆಗಿನ ತಮ್ಮ 20 ವರ್ಷಗಳ ನಂಟು ಮುರಿದು ಇತ್ತೀಚೆಗೆ ಕಾಂಗ್ರೆಸ್ ಸೇರಿರುವ ಹಿರಿಯ ನಟ-ರಾಜಕಾರಣಿ ಶತ್ರುಘ್ನ ಸಿನ್ಹಾ ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

“ನಾನು ಒಂದು ಹೊಸ ಹಾಗೂ ಉತ್ತಮ ದಿಕ್ಕನ್ನು ಸೇರಿದಾಗ ಅಡ್ವಾಣಿ ಜಿ ಅವರ ಆಶೀರ್ವಾದ ಕೋರಿದ್ದೆ. ಅವರ ಕಣ್ಣುಗಳಲ್ಲಿ ನೀರಿತ್ತು ಆದರೆ ಹೋಗಬೇಡ ಎಂದು ಅವರು ಹೇಳಿಲ್ಲ,  ಸರಿ, ನಿನ್ನ ಮೇಲೆ ಪ್ರೀತಿಯಿದೆ ಎಂದು ಹೇಳಿದರು'' ಎಂದು ಸಿನ್ಹಾ ವಿವರಿಸಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಬಿಜೆಪಿ ಸೇರಿದ್ದ ಸಿನ್ಹಾ ಆಗಿನ ಕಾಲ ಮತ್ತು ಈಗಿನ ಕಾಲದ ನಡುವಿನ ವ್ಯತ್ಯಾಸದ ಬಗ್ಗೆ  ಹೇಳುತ್ತಾ ಅದು ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರದ ನಡುವಿನ ವ್ಯತ್ಯಾಸವಿದ್ದಂತೆ ಎಂದರು. ಈಗಿನ ಬಿಜೆಪಿ ನಾಯಕತ್ವ ಪಕ್ಷದ ಹಿರಿಯರನ್ನು ಚೆನ್ನಾಗಿ ನೋಡಿಕೊಂಡಿಲ್ಲ ಎಂದು ಅಡ್ವಾಣಿ, ವಾಜಪೇಯಿ ಮುಂತಾದವರನ್ನು ಉಲ್ಲೇಖಿಸಿ ಸಿನ್ಹಾ ಹೇಳಿದರು.

“ಅವರಿಗೆ ನಾನು ಯಾವತ್ತೂ ತಲೆ ಬಾಗುವುದಿಲ್ಲ, ಅಡ್ವಾಣಿ ಜೀ ಅವರಂತೆ, ಅವರು ಕುಳಿತುಕೊಳ್ಳಲು ಹೇಳಿದರೆ ಕುಳಿತುಕೊಳ್ಳುವುದಿಲ್ಲ'' ಎಂದು ಸ್ಪಷ್ಟ ಪಡಿಸಿದರು.

ಬಾಲಕೋಟ್ ವಾಯುದಾಳಿ ಈ ಚುನಾವಣೆಯಲ್ಲಿ ಏನಾದರೂ ವ್ಯತ್ಯಾಸವುಂಟು ಮಾಡುವುದೇ ಎಂಬ ಪ್ರಶ್ನೆಗೆ “ಪ್ರತಿಯೊಬ್ಬ ಭಾರತೀಯ ರಾಷ್ಟ್ರವಾದಿ” ಎಂದರು. “ಆದರೆ ರಾಷ್ಟ್ರವಾದದ ವಿಚಾರವೆತ್ತಿ ಪ್ರಧಾನಿ ಪ್ರಶ್ನೆಗಳನ್ನು ದೂರ ಮಾಡುತ್ತಿದ್ದಾರೆ. ನಾವು ಉದ್ಯೋಗ ವಿಚಾರ ಎತ್ತಿದರೆ ಅವರು ಪುಲ್ವಾಮ ವಿಚಾರ ಮಾತನಾಡುತ್ತಾರೆ, ಜನರಿಗೆ ಬೇಕಾದ ಪ್ರಶ್ನೆಗಳಿಗೆ ಅವರೇಕೆ ಉತ್ತರಿಸುವುದಿಲ್ಲ ?, ಮತ ಎಣಿಕೆಯ ದಿನವಾದ ಮೇ 23ರ ನಂತರ ಅವರು ಪ್ರಧಾನಿಯಾಗಿ ಉಳಿಯುವುದಿಲ್ಲ, ಮಮತಾ ಬ್ಯಾನರ್ಜಿ ನನ್ನ ಸ್ನೇಹಿತೆಯಾಗಿದ್ದು ಮೋದಿ ಎಕ್ಸ್‍ಪೈರಿ ಪಿಎಂ ಎಂದು ಅವರು ಸರಿಯಾಗಿಯೇ ಹೇಳಿದ್ದಾರೆ.  ನಾನು ನನ್ನ ಚೀಲ ಎತ್ತಿಕೊಂಡು ಹೊರಟು ಹೋಗುತ್ತೇನೆ ಎಂದು ಅವರು ಹೇಳುತ್ತಿದ್ದರು. ಈಗ ಹಾಗೆ ಮಾಡುವ ಸಮಯ ಬಂದಿದೆ” ಎಂದರು ಸಿನ್ಹಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News