ಪಿತ್ತಕೋಶದ ನೋವಿನ ಶಮನಕ್ಕೆ ನೈಸರ್ಗಿಕ ಉಪಾಯಗಳು ಇಲ್ಲಿವೆ…

Update: 2019-05-15 16:45 GMT

ಪಿತ್ತಕೋಶವು ಯಕೃತ್ತು ಉತ್ಪಾದಿಸುವ ಪಿತ್ತರಸವನ್ನು ಸಂಗ್ರಹಿಸುವ ಅಂಗವಾಗಿದೆ. ರಕ್ತವು ವಿಟಾಮಿನ್‌ಗಳು ಮತ್ತು ಇತರ ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳುವ ಪ್ರಕ್ರಿಯೆಗೆ ನೆರವಾಗಲು ಪಿತ್ತಕೋಶವು ಸಣ್ಣಕರುಳಿಗೂ ಪಿತ್ತರಸವನ್ನು ರವಾನಿಸುತ್ತದೆ. ಪಿತ್ತರಸವು ಕೊಬ್ಬುಗಳನ್ನು ಜೀರ್ಣಗೊಳಿಸಲು ನೆರವಾಗುತ್ತದೆ. ಈ ಯಾವುದೇ ಪ್ರಕ್ರಿಯೆಗೆ ವ್ಯತ್ಯಯವುಂಟಾದಾಗ ಪಿತ್ತಕೋಶ ರೋಗದಿಂದಾಗಿ ವಿವಿಧ ಸಮಸ್ಯೆಗಳು ಮತ್ತು ಸೋಂಕುಗಳು ಉಂಟಾಗುತ್ತವೆ. ಸಾಮಾನ್ಯವಾಗಿ ಉರಿಯೂತದಿಂದಾಗಿ ನೋವು ಪಿತ್ತಕೋಶ ರೋಗದ ಲಕ್ಷಣವಾಗಿದೆ. ಉದರದ ಬಲ ಮೇಲ್ಭಾಗದಲ್ಲಿ ತೀವ್ರನೋವು ಕಾಣಿಸಿಕೊಳ್ಳುತ್ತದೆ. ಗಾಢವರ್ಣದ ಮೂತ್ರ,ವಾಂತಿ,ವಾಕರಿಕೆ,ಅತಿಸಾರ ಮತ್ತು ಜ್ವರದಂತಹ ಇತರ ಲಕ್ಷಣಗಳೂ ಕಂಡುಬರಬಹುದು.

ವೈದ್ಯರು ಪಿತ್ತಕೋಶದ ನೋವಿನ ಚಿಕಿತ್ಸೆಯಲ್ಲಿ ಹೆಚ್ಚಾಗಿ ಉರಿಯೂತ ನಿರೋಧಕ ಔಷಧಿಗಳನ್ನು ಬಳಸುತ್ತಾರೆ. ಆದರೆ ಕೆಲವೊಮ್ಮೆ ಈ ಔಷಧಿಗಳು ಅಪಾಯಕಾರಿ ಅಡ್ಡ ಪರಿಣಾಮಗಳನ್ನುಂಟು ಮಾಡಬಹುದು ಮತ್ತು ಅವುಗಳ ಮೇಲೆ ಅವಲಂಬನೆಯ ಅಪಾಯವನ್ನು ಹೆಚ್ಚಿಸಬಹುದು. ಹೀಗಾಗಿ ನೈಸರ್ಗಿಕ ಮತ್ತು ಮನೆಮದ್ದುಗಳ ಬಳಕೆ ಪಿತ್ತಕೋಶ ನೋವನ್ನು ಶಮನಿಸಲು ಉತ್ತಮ ಮಾರ್ಗವಾಗಿದೆ. ಅಂತಹ ಕೆಲವು ನೈಸರ್ಗಿಕ ವಿಧಾನಗಳಿಲ್ಲಿವೆ.........

►ಆಹಾರದಲ್ಲಿ ಬದಲಾವಣೆ

 ಕಡಿಮೆ ಕೊಬ್ಬು ಮತ್ತು ಹೆಚ್ಚು ನಾರು ಇರುವ ಆಹಾರವನ್ನು ಸೇವಿಸುವುದು ಪಿತ್ತಕೋಶ ನೋವನ್ನು ನಿವಾರಿಸುವಲ್ಲಿ ಮುಖ್ಯವಾಗಿದೆ. ಸಕ್ಕರೆ ಮತ್ತು ಕೊಬ್ಬುಗಳು ಹೆಚ್ಚಾಗಿರುವ ಆಹಾರವನ್ನು ಸೇವಿಸುವುದರಿಂದ ನೋವು ಇನ್ನಷ್ಟು ಹೆಚ್ಚುತ್ತದೆ. ತರಕಾರಿಗಳು ಮತ್ತು ಹಣ್ಣುಗಳಂತಹ ಪೋಷಕಾಂಶಭರಿತ ಆಹಾರಗಳನ್ನು ಹೆಚ್ಚಾಗಿ ಸೇವಿಸಿ. ಕರಿದ ಮತ್ತು ಕೊಬ್ಬುಗಳಿರುವ ಆಹಾರಗಳು ಜೀರ್ಣಗೊಳ್ಳಲು ಹೆಚ್ಚು ಕಷ್ಟ ಮತ್ತು ನೋವಿಗೆ ಕಾರಣವಾಗುತ್ತವೆ. ಆರೋಗ್ಯಕರ ಆಹಾರವು ಪಿತ್ತಕೋಶದ ಕಾರ್ಯ ನಿರ್ವಹಣೆಯನ್ನು ಉತ್ತಮಗೊಳಿಸುತ್ತದೆ ಮತ್ತು ಸಮಸ್ಯೆಗಳನ್ನು ತಡೆಯುತ್ತದೆ. ಕಡಿಮೆ ಕೊಬ್ಬು ಇರುವ ಡೇರಿ ಉತ್ಪನ್ನಗಳು, ಆಲಿವ್ ಎಣ್ಣೆ,ಸಿಟ್ರಸ್ ವರ್ಗಕ್ಕೆ ಸೇರಿದ ಹಣ್ಣುಗಳು, ಸೊಪ್ಪು, ಬಾದಾಮ್‌ನಂತಹ ಪೌಷ್ಟಿಕ ಬೀಜಗಳು, ಬೀನ್ಸ್, ಕಂದು ಅಕ್ಕಿ, ಇಡಿಯ ಧಾನ್ಯಗಳು ಇತ್ಯಾದಿ ಆಹಾರಗಳು ನಿಮ್ಮ ಊಟದಲ್ಲಿರಲಿ.

►ಬಿಸಿ ಚಿಕಿತ್ಸೆ

ಬಿಸಿ ನೀರಿನಲ್ಲಿ ಟವೆಲ್ ಅದ್ದಿ ಅದನ್ನು 10-15 ನಿಮಿಷಗಳ ಕಾಲ ಪೀಡಿತ ಜಾಗದ ಮೇಲಿರಿಸಿ. ಇದರಿಂದ ಪಿತ್ತಕೋಶದ ನೋವು ಕಡಿಮೆಯಾಗುತ್ತದೆ. ಹೀಟಿಂಗ್ ಪ್ಯಾಡ್ ಅಥವಾ ಬಿಸಿನೀರಿನ ಚೀಲವನ್ನು ಬಳಸಿ ಶಾಖವನ್ನೂ ನೀಡಬಹುದು. ನೋವು ಸಂಪೂರ್ಣವಾಗಿ ನಿವಾರಣೆಯಾಗುವವರೆಗೂ ಈ ಚಿಕಿತ್ಸೆಯನ್ನು ಮುಂದುವರಿಸಿ.

►ಆ್ಯಪಲ್ ಸಿಡರ್ ವಿನೆಗರ್

ಕಚ್ಚಾ ಆ್ಯಪಲ್ ಸಿಡರ್ ವಿನೆಗರ್‌ನಲ್ಲಿ ಸಮೃದ್ಧವಾಗಿರುವ ಉರಿಯೂತ ನಿರೋಧಕ ಗುಣಗಳು ಪಿತ್ತಕೋಶದ ನೋವಿನಿಂದ ಮುಕ್ತಿ ಪಡೆಯಲು ನೆರವಾಗುತ್ತವೆ. ಎರಡು ಟೇಬಲ್ ಸ್ಪೂನ್ ಆ್ಯಪಲ್ ಸಿಡರ್ ವಿನೆಗರ್ ಅನ್ನು ಬಿಸಿ ನೀರಿನಲ್ಲಿ ಸೇರಿಸಿ ನೋವು ಕಡಿಮೆಯಾಗುವವರೆಗೂ ಈ ದ್ರಾವಣವನ್ನು ಗುಟುಕರಿಸುತ್ತಿರಬೇಕು. ಆ್ಯಪಲ್ ಸಿಡರ್ ವಿನೆಗರ್‌ನ್ನು ನೇರವಾಗಿ ಸೇವಿಸಬಾರದು ಎನ್ನುವುದು ನೆನಪಿರಲಿ,ಹಾಗೆ ಮಾಡುವುದರಿಂದ ಆಮ್ಲವು ಹಲ್ಲುಗಳಿಗೆ ಹಾನಿಯನ್ನುಂಟು ಮಾಡುತ್ತದೆ.

►ಅರಿಷಿಣ

 ಬ್ಯಾಕ್ಟೀರಿಯಾ ನಿರೋಧಕ ಗುಣಗಳಿಂದ ಸಮೃದ್ಧವಾಗಿರುವ ಅರಿಷಿಣವನ್ನು ಹಲವಾರು ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಅದರಲ್ಲಿರುವ ಕರ್ಕುಮಿನ್ ತನ್ನ ಉರಿಯೂತ ನಿರೋಧಕ ಮತ್ತು ಚಿಕಿತ್ಸಾ ಗುಣಕ್ಕಾಗಿ ಹೆಸರಾಗಿದೆ. ನೋವಿನಿಂದ ಮುಕ್ತಿ ಪಡೆಯಲು ಅರಿಷಿಣದ ಕಷಾಯವನ್ನು ದಿನವೂ ಸೇವಿಸಬಹುದು. ಅದು ಪಿತ್ತವನ್ನು ಉತ್ಪಾದಿಸಲು ಪಿತ್ತಕೋಶಕ್ಕೆ ಪ್ರಚೋದನೆ ನೀಡುತ್ತದೆ ಮತು ಪಿತ್ತಕೋಶವನ್ನು ಖಾಲಿಯಾಗಿಸಲು ನೆರವಾಗುತ್ತದೆ. ಆಹಾರದಲ್ಲಿ ಅರಿಷಿಣವನ್ನು ಸೇರಿಸಿಕೊಳ್ಳುವುದರಿಂದ ಉರಿಯೂತ ಮತ್ತು ಪಿತ್ತಕೋಶ ನೋವು ಕಡಿಮೆಯಾಗುತ್ತದೆ.

►ಪುದೀನಾ ಕಷಾಯ

ಪುದೀನಾದಲ್ಲಿರುವ ಮೆಂಥಾಲ್ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ ಮತ್ತು ನೋವಿನಿಂದ ಮುಕ್ತಿ ಪಡೆಯಲು ನೆರವಾಗುತ್ತದೆ. ಹೊಟ್ಟೆನೋವಿಗೆ ಮೆಂಥಾಲ್ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ, ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ವಾಕರಿಕೆಯಿಂದ ಮುಕ್ತಿ ನೀಡುತ್ತದೆ. ಪಿತ್ತಕೋಶದ ನೋವನ್ನು ನಿವಾರಿಸಲು ಮತ್ತು ಅದರ ಆರೋಗ್ಯವನ್ನು ಹೆಚ್ಚಿಸಲು ಪುದೀನಾ ಕಷಾಯವು ನೆರವಾಗುತ್ತದೆ. ನೋವು ನಿವಾರಣೆಯಾಗುವವರೆಗೂ ಈ ಕಷಾಯವನ್ನು ಸೇವಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News