ಗಾಂಜಾ ಮಾರಾಟ: ಕೇರಳ ಮೂಲದ ಮೂವರು ವಿದ್ಯಾರ್ಥಿಗಳ ಬಂಧನ

Update: 2019-05-15 17:12 GMT

ಬೆಂಗಳೂರು, ಮೇ 15: ಮಾದಕ ವಸ್ತು ಗಾಂಜಾ ಮಾರಾಟ ಆರೋಪ ಸಂಬಂಧ ಕೇರಳ ಮೂಲದ ಮೂವರು ವಿದ್ಯಾರ್ಥಿಗಳನ್ನು ಬಂಧಿಸಿರುವ ಇಲ್ಲಿನ ಸುದ್ದಗುಂಟೆ ಠಾಣಾ ಪೊಲೀಸರು, 23 ಕೆಜಿ 300 ಗ್ರಾಂ ತೂಕದ ಗಾಂಜಾ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕೇರಳ ರಾಜ್ಯದ ಶ್ಯಾಂದಾಸ್(25), ಹರೀಶ್ ಕುಮಾರ್(24) ಹಾಗೂ ಜಿಬಿನ್ ಜಾನ್(21) ಎಂಬುವರು ಬಂಧಿತ ಆರೋಪಿಗಳೆಂದು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ತಿಳಿಸಿದರು.

ಬಿಎ ಪದವಿ ಸಾಹಿತ್ಯ ವಿದ್ಯಾರ್ಥಿಯಾಗಿದ್ದ ಶ್ಯಾಂದಾಸ್ ಹಾಗೂ ಸಿವಿಲ್ ವೃತ್ತಿಪರ ಕೋರ್ಸ್ ವ್ಯಾಸಂಗ ಮಾಡುತ್ತಿರುವ ಹರೀಶ್‌ಕುಮಾರ್ ಹಾಗೂ ಬಿಟೆಕ್ ಇಂಜಿನಿಯರಿಂಗ್ ಓದುತ್ತಿದ್ದ ಜಿಬಿನ್‌ಜಾನ್, 3 ತಿಂಗಳಿನಿಂದ ನಗರಕ್ಕೆ ಬಂದು ಆವಲಹಳ್ಳಿಯಲ್ಲಿ ಬಾಡಿಗೆ ಮನೆ ಪಡೆದುಕೊಂಡಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಕೇರಳ, ವಿಶಾಖಪಟ್ಟಣದಿಂದ ಗಾಂಜಾವನ್ನು ತಂದು ನಗರದ ಹಲವು ಕಡೆ ಮಾರಾಟ ಮಾಡುತ್ತಿದ್ದರು. ಪ್ಲಾಸ್ಟಿಕ್ ಚೀಲದಲ್ಲಿ ಯಾರಿಗೂ ಗೊತ್ತಾಗದಂತೆ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳು, ತಮ್ಮ ಬಳಿಯಲ್ಲೇ ತೂಕದ ಯಂತ್ರಗಳನ್ನಿಟ್ಟುಕೊಂಡು ಅದರಿಂದ ಗಿರಾಕಿಗಳಿಗೆ ತೂಕ ಮಾಡಿ ಮಾರಾಟ ಮಾಡುತ್ತಿದ್ದರು ಎಂದು ತಿಳಿಸಿದರು.

ಕಾಲೇಜು ವಿದ್ಯಾರ್ಥಿಗಳು, ಐಟಿ-ಬಿಟಿ ಉದ್ಯೋಗಿಗಳನ್ನು ಕೇಂದ್ರೀಕರಿಸಿಕೊಂಡು ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದು, ಆರೋಪಿಗಳ ಜೊತೆ ಕೈಜೋಡಿಸಿದ್ದ, ಇನ್ನಿಬ್ಬರು ಪರಾರಿಯಾಗಿದ್ದಾರೆ. ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News