ಬೆಂಗಳೂರು: ನಿಂಬೆ ಹಣ್ಣು ವ್ಯಾಪಾರಿಯ ಹತ್ಯೆ

Update: 2019-05-15 17:21 GMT
ಭರತ್

ಬೆಂಗಳೂರು, ಮೇ 15: ಹಳೆ ದ್ವೇಷದ ಹಿನ್ನೆಲೆಯಲ್ಲಿ ನಿಂಬೆಹಣ್ಣು ವ್ಯಾಪಾರಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದುಷ್ಕರ್ಮಿಗಳು ಕೊಲೆಗೈದಿರುವ ಘಟನೆ ಇಲ್ಲಿನ ಸಿಟಿ ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹಳೆಗುಡ್ಡದ ಹಳ್ಳಿಯ ಭರತ್(32) ಎಂಬಾತ ಕೊಲೆಯಾಗಿರುವ ನಿಂಬೆ ಹಣ್ಣು ವ್ಯಾಪಾರಿ ಎಂದು ತಿಳಿದುಬಂದಿದೆ.

ಹಳೆಗುಡ್ಡದ ಹಳ್ಳಿಯಲ್ಲಿ ವಾಸಿಸುತ್ತಿದ್ದ ಭರತ್, ಸಿಟಿ ಮಾರುಕಟ್ಟೆಯ ಕಾಂಪ್ಲೆಕ್ಸ್ ಬಳಿ ನಿಂಬೆಹಣ್ಣು ವ್ಯಾಪಾರ ಮಾಡುತ್ತಿದ್ದರೆ, ಸಮೀಪದಲ್ಲಿಯೇ ಶರವಣ ನಿಂಬೆಹಣ್ಣಿನ ಜತೆಗೆ ತರಕಾರಿ ವ್ಯಾಪಾರ ಮಾಡುತ್ತಿದ್ದ. ಕಳೆದ ಒಂದು ತಿಂಗಳ ಹಿಂದೆ ಇವರಿಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿ ಇಬ್ಬರೂ ಜೈಲಿಗೆ ಹೋಗಿ ಬಂದಿದ್ದರು.

ಭರತ್ ತನ್ನನ್ನು ಕೊಲೆ ಮಾಡಬಹುದು ಎನ್ನುವ ಆತಂಕದಿಂದ ನಾಲ್ಕೈದು ಮಂದಿ ಸಹಚರರ ಜತೆ ಮಂಗಳವಾರ ರಾತ್ರಿ 9ರ ವೇಳೆ ಸಿಟಿ ಮಾರುಕಟ್ಟೆ ಕಾಂಪ್ಲೆಕ್ಸ್ ಬಳಿಗೆ ಬಂದ ಶರವಣ, ಭರತ್ ಮೇಲೆ ಏಕಾಏಕಿ ದಾಳಿ ನಡೆಸಿ ಕೊಲೆಗೈದು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಸಂಬಂಧ ಪ್ರಕರಣ ದಾಖಲಿಸಿರುವ ಸಿಟಿ ಮಾರುಕಟ್ಟೆ ಪೊಲೀಸರು ಕೊಲೆಗೈದು ಪರಾರಿಯಾಗಿರುವ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News