ಪುಸ್ತಕ ಪ್ರಕಟಣೆಯಲ್ಲಿ ದೇಶವು ವಿಶ್ವದಲ್ಲೇ 7ನೇ ಸ್ಥಾನಲ್ಲಿದೆ: ಬರಗೂರು ರಾಮಚಂದ್ರಪ್ಪ

Update: 2019-05-15 17:37 GMT

ಬೆಂಗಳೂರು, ಮೇ 15: ಪ್ರತಿ ವರ್ಷ 80 ಸಾವಿರಕ್ಕಿಂತ ಹೆಚ್ಚು ಪುಸ್ತಕಗಳು ಪ್ರಕಟವಾಗುತಿದ್ದು, ಪುಸ್ತಕ ಪ್ರಕಟಣೆಯಲ್ಲಿ ನಮ್ಮ ದೇಶವು ವಿಶ್ವದಲ್ಲೇ 7ನೇ ಸ್ಥಾನದಲ್ಲಿದೆ. ಈ ಅಂಕಿ-ಅಂಶ ಗಮನಿಸಿದರೆ ಪುಸ್ತಕೋದ್ಯಮಕ್ಕೆ ಸಾವಿಲ್ಲ ಎಂಬುದು ತಿಳಿಯುತ್ತದೆ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಹೇಳಿದರು.

ಬುಧವಾರ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶಾಂತವೇರಿ ಗೋಪಾಲಗೌಡ ವಿಚಾರ ಸಂಸ್ಥೆ ಏರ್ಪಡಿಸಿದ್ದ ಪುಸ್ತಕ ಸಂಸ್ಕೃತಿ ಪ್ರಶಸ್ತಿ ಹಾಗೂ ಸಿ.ಕೆ.ರಾಮೇಗೌಡರ ಬೆಂಗಳೂರು- ನಮ್ಮ ಹೆಮ್ಮೆ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಷ್ಟ್ರದಲ್ಲಿ 19 ಸಾವಿರ ನೋಂದಾಯಿತ ಪ್ರಕಾಶನ ಸಂಸ್ಥೆಗಳಿವೆ. ಪುಸ್ತಕೋದ್ಯಮದ ಮೇಲೆ 19 ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗಿದೆ. ಮಾಹಿತಿ ತಂತ್ರಜ್ಞಾನದಲ್ಲಾದ ಕ್ರಾಂತಿಯಿಂದ ಪುಸ್ತಕೋದ್ಯಮಕ್ಕೆ ಹಿನ್ನಡೆಯಾಗಿದೆಯೇ ಹೊರತು ಸಂಪೂರ್ಣವಾಗಿ ನಶಿಸಿಲ್ಲ ಎಂದು ತಿಳಿಸಿದರು.

ಕಂಪ್ಯೂಟರ್ ಬಂದಾಗ ಪುಸ್ತಕ, ಸಿನಿಮಾದಿಂದ ರಂಗಭೂಮಿ ಹಾಗೂ ಟಿವಿ ಆವಿಷ್ಕಾರದಿಂದ ಸಿನಿಮಾ ನಶಿಸುತ್ತದೆ ಎಂದು ಎಲ್ಲರೂ ನಂಬುವ ಮೂಲಕ ಚರ್ಚೆ ನಡೆಸುತ್ತಿದ್ದರು. ಆದರೆ ಪುಸ್ತಕ, ರಂಗಭೂಮಿ ಹಾಗೂ ಸಿನಿಮಾಗಳು ಅಲ್ಪ ಕಾಲದಲ್ಲಿ ಹಿನ್ನಡೆ ಅನುಭವಿಸಿದವು. ನಂತರ ಪೈಪೋಟಿ ನಡೆಸಿ ಇಂದಿಗೂ ಮುನ್ನಡೆಯುತ್ತಿವೆ. ಸಿನಿಮಾ, ರಂಗಭೂಮಿ ಹಾಗೂ ಪುಸ್ತಕಕ್ಕೆ ಸಾವು ಇಲ್ಲ ಎಂದು ಅವರು ನುಡಿದರು.

ಒಂದು ಮಾಧ್ಯಮ ಮತ್ತೊಂದು ಮಾಧ್ಯಮಕ್ಕೆ ಯಾವತ್ತು ವಿರೋಧಿ ಅಲ್ಲ. ಅವುಗಳ ನಡುವೆ ಆರಂಭದಲ್ಲಿ ಸಂಘರ್ಷ ಎದುರಾಗಿ ನಂತರ ಮುಖ-ಮುಖಿಯಾಗಿ ಅನುಸಂಧಾನಗೊಳ್ಳುತ್ತವೆ ಎಂದು ಹೇಳಿದರು.

ಹಿರಿಯ ಸಾಹಿತಿ ಡಾ.ಬಸವರಾಜು ಕಲ್ಗುಡಿ ಮಾತನಾಡಿ, ಸಿ.ಕೆ.ರಾಮೇಗೌಡರ ಬೆಂಗಳೂರು- ನಮ್ಮ ಹೆಮ್ಮೆ ಪುಸ್ತಕ ಬೆಂಗಳೂರಿನ ಇತಿಹಾಸ, ಸಂಸ್ಕೃತಿ, ವಾಸ್ತುಶಿಲ್ಪ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಲೇಖಕರು ಅಂದಾಜು 30ಕ್ಕಿಂತ ಹೆಚ್ಚು ಕೃತಿಗಳನ್ನು ಅಭ್ಯಾಸ ಮಾಡಿ ಈ ಸಂಗ್ರಹ ಪುಸ್ತಕ ರಚಿಸಿದ್ದಾರೆ. 50 ವರ್ಷಗಳ ಹಿಂದಿನ ಬೆಂಗಳೂರು ಹಾಗೂ ಇಂದಿನ ಬೆಂಗಳೂರನ್ನು ಪುಸ್ತಕ ಓದುಗರಿಗೆ ತಿಳಿಸುತ್ತದೆ ಎಂದರು.

ಸಂಸ್ಕೃತಿ ಚಿಂತಕ ಡಾ. ಬರಗೂರು ರಾಮಚಂದ್ರಪ್ಪ ಅವರು ಅಂಕಿತ ಪುಸ್ತಕ ಪ್ರಕಾಶಕ ಪ್ರಕಾಶ್ ಕಂಬತ್ತಳ್ಳಿ ದಂಪತಿಗೆ ಪುಸ್ತಕ ಸಂಸ್ಕೃತಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಜಾನಪದ ವಿದ್ವಾಂಸ ಡಾ.ಮೀರಾಸಾಬಿಹಳ್ಳಿ ಶಿವಣ್ಣ, ಐಸಿರಿ ಪ್ರಕಾಶನ ಸಂಸ್ಥೆಯ ಡಾ.ಮಂಜುನಾಥ ಪಾಳ್ಯ ಹಾಗೂ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News