ಭಾರತೀಯ ಫುಟ್ಬಾಲ್ ತಂಡದ ಪ್ರಧಾನ ಕೋಚ್ ಆಗಿ ಇಗೊರ್ ಸ್ಟಿಮಾಕ್ ಆಯ್ಕೆ

Update: 2019-05-16 03:50 GMT

ಹೊಸದಿಲ್ಲಿ, ಮೇ 15: ಕ್ರೊಯೇಶಿಯದ ಇಗೊರ್ ಸ್ಟಿಮಾಕ್ ಎರಡು ವರ್ಷಗಳ ಅವಧಿಗೆ ಭಾರತೀಯ ಪುರುಷರ ಫುಟ್ಬಾಲ್ ತಂಡದ ಪ್ರಧಾನ ಕೋಚ್ ಆಗಿ ಬುಧವಾರ ಆಯ್ಕೆಯಾಗಿದ್ದಾರೆ.

 ಜನವರಿಯಲ್ಲಿ ಸ್ಟೀಫನ್ ಕಾನ್‌ಸ್ಟನ್‌ಟೈನ್ ನಿರ್ಗಮಿಸಿದ ಬಳಿಕ ಭಾರತ ತಂಡದ ಕೋಚ್ ಹುದ್ದೆ ಖಾಲಿಯಾಗಿತ್ತು. ಎಎಫ್‌ಸಿ ಏಶ್ಯನ್ ಕಪ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದ ಬಳಿಕ ಕಾನ್‌ಸ್ಟನ್‌ಟೈನ್ ತನ್ನ ಹುದ್ದೆ ತ್ಯಜಿಸಿದ್ದರು.

ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್)ಕಾರ್ಯಕಾರಿ ಸಮಿತಿಯು ಭಾರತದ ಮುಖ್ಯ ಕೋಚ್‌ರನ್ನು ಆಯ್ಕೆ ಮಾಡಿದೆ. 51ರ ಹರೆಯದ ಸ್ಟಿಮಾಕ್ 1998ರ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದ ಕ್ರೊಯೇಶಿಯ ತಂಡದ ಸದಸ್ಯರಾಗಿದ್ದರು. ಫ್ರಾನ್ಸ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಕ್ರೊಯೇಶಿಯ 3ನೇ ಸ್ಥಾನ ಪಡೆದಿತ್ತು. ಸ್ಟಿಮಾಕ್‌ಗೆ ಕ್ರೊಯೇಶಿಯ ಪರ ಹಾಗೂ ಅಂತರ್‌ರಾಷ್ಟ್ರೀಯ ತಂಡದಲ್ಲಿ 18 ವರ್ಷಗಳ ಕಾಲ ಕೋಚ್ ಆಗಿ ದುಡಿದಿರುವ, ಫುಟ್ಬಾಲ್ ಪ್ರಗತಿ ಹಾಗೂ ಆಟಗಾರರ ಬೆಳವಣಿಗೆಯ ನಿಟ್ಟಿನಲ್ಲಿ ಕೆಲಸ ಮಾಡಿದ ಅನುಭವವಿದೆ.

 ಕೋಚ್ ಆಗಿ 2014ರಲ್ಲಿ ಬ್ರೆಝಿಲ್‌ನಲ್ಲಿ ನಡೆದ ಫಿಫಾ ವಿಶ್ವಕಪ್‌ನಲ್ಲಿ ಕ್ರೊಯೇಶಿಯ ತಂಡ ಅರ್ಹತೆ ಪಡೆಯಲು ಮಾರ್ಗದರ್ಶನ ನೀಡಿರುವುದು ಸ್ಟಿಮಾಕ್ ಅವರ ಮಹತ್ವದ ಸಾಧನೆಯಾಗಿದೆ. ಸ್ಟಿಮಾಕ್ ಕ್ರೊಯೇಶಿಯ ಕೋಚ್ ಆಗಿದ್ದ ಅವಧಿಯಲ್ಲಿ ಮಟೆವೊ ಕೊವಾಸಿಕ್, ಅಂಟೆ ರೆಬಿಕ್, ಅಲೆನ್ ಹಾಲಿಲೊವಿಕ್ ಹಾಗೂ ಇವಾನ್ ಪೆರಿಸಿಕ್‌ರಂತಹ ಯುವ ಆಟಗಾರರಿಗೆ ಚೊಚ್ಚಲ ಪಂದ್ಯ ಆಡಲು ಅವಕಾಶ ನೀಡಿದ್ದರು.

ಡರಿಯೊ ಸರ್ನಾ, ಡೇನಿಯಲ್ ಸುಬಾಸಿಕ್, ಇವಾನ್ ಸ್ಟ್ರಿನಿಕ್, ಕೊವಾಸಿಕ್, ಪೆರಿಸಿಕ್ ಹಾಗೂ ಇತರ ಆಟಗಾರರ ಬೆಳವಣಿಗೆಯಲ್ಲಿ ಸ್ಟಿಮಾಕ್ ಪ್ರಮುಖ ಪಾತ್ರವಹಿಸಿದ್ದರು. 1998ರ ವಿಶ್ವಕಪ್‌ನಲ್ಲಿ ಕ್ರೊಯೇಶಿಯ ತಂಡ ಮೂರನೇ ಸ್ಥಾನ ಪಡೆದಾಗ ಸ್ಟಿಮಾಕ್ ತಂಡದ ಸದಸ್ಯರಾಗಿದ್ದರು. ಇಂಗ್ಲೆಂಡ್‌ನಲ್ಲಿ 1996ರಲ್ಲಿ ನಡೆದಿದ್ದ ಯುರೋ ಚಾಂಪಿಯನ್‌ಶಿಪ್‌ನಲ್ಲಿ ಕ್ರೊಯೇಶಿಯ ಕ್ವಾರ್ಟರ್ ಫೈನಲ್ ತಲುಪಿದ್ದಾಗ ತಂಡದ ಸದಸ್ಯರಾಗಿದ್ದರು. 1987ರಲ್ಲಿ ಯುಗೊಸ್ಲಾವಿಯಾ ಅಂಡರ್-19 ರಾಷ್ಟ್ರೀಯ ತಂಡ ಫಿಫಾ ಅಂಡರ್-20 ವಿಶ್ವಕಪ್ ಜಯಿಸುವಲ್ಲಿಯೂ ತನ್ನ ಕಾಣಿಕೆ ನೀಡಿದ್ದರು.

ಭಾರತೀಯ ಫುಟ್ಬಾಲ್ ತಂಡಕ್ಕೆ ಸ್ಟಿಮಾಕ್‌ರನ್ನು ಸ್ವಾಗತಿಸಿದ ಎಐಎಫ್‌ಎಫ್ ಅಧ್ಯಕ್ಷ ಪ್ರಫುಲ್ ಪಟೇಲ್, ‘‘ಬ್ಲೂ ಟೈಗರ್ಸ್‌ಗೆ(ಭಾರತ ತಂಡ)ಇಗೊರ್ ಸರಿಯಾದ ಅಭ್ಯರ್ಥಿ. ಅವರನ್ನು ನಾನು ಸ್ವಾಗತಿಸುತ್ತೇನೆ. ಭಾರತೀಯ ಫುಟ್ಬಾಲ್ ತಂಡವೀಗ ಪರಿವರ್ತನೆಯ ಹಾದಿಯಲ್ಲಿದೆ. ಆಟಗಾರನಾಗಿ ಹಾಗೂ ಕೋಚ್ ಆಗಿ ಅಗಾಧ ಅನುಭವವಿರುವ ಇಗೊರ್ ನಮ್ಮ ತಂಡವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದ್ದಾರೆ. ಅವರಿಂದ ಭಾರತ ತಂಡ ಸಾಕಷ್ಟು ಲಾಭ ಪಡೆಯಲಿದೆ’’ ಎಂದರು.

 ಥಾಯ್ಲೆಂಡ್‌ನಲ್ಲಿ ನಡೆಯಲಿರುವ ಕಿಂಗ್ಸ್‌ಕಪ್ ಭಾರತ ಕೋಚ್ ಆಗಿ ಸ್ಟಿಮಾಕ್‌ರ ಮೊದಲ ಟೂರ್ನಿಯಾಗಿದೆ. ಭಾರತ ಜೂ.5 ರಂದು ತನ್ನ ಮೊದಲ ಪಂದ್ಯದಲ್ಲಿ ಕುರಾಕಾವೊ ತಂಡವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News