ಬೋಫೋರ್ಸ್ ಪ್ರಕರಣದ ವಿಸ್ತೃತ ತನಿಖೆಗೆ ಅನುಮತಿ ಕೋರಿ ಸಲ್ಲಿಸಿದ್ದ ಅಪೀಲು ವಾಪಸ್ ಪಡೆದ ಸಿಬಿಐ

Update: 2019-05-16 10:24 GMT

ಹೊಸದಿಲ್ಲಿ, ಮೇ 16: 64 ಕೋಟಿ ರೂ. ಬೋಫೋರ್ಸ್ ಲಂಚ ಪ್ರಕರಣದ ಬಗ್ಗೆ ವಿಸ್ತೃತ ತನಿಖೆಗೆ ಅನುಮತಿ ಕೋರಿ ತಾನು ದಿಲ್ಲಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅಪೀಲನ್ನು ಸಿಬಿಐ ಗುರುವಾರ ವಾಪಸ್ ಪಡೆದಿದೆ. ತನ್ನ ಬಳಿ ಹೊಸ ಸಾಕ್ಷ್ಯಗಳಿವೆ ಎಂದು ಫೆಬ್ರವರಿ 1, 2018ರಂದು ಅಪೀಲು ಸಲ್ಲಿಸಿದ್ದ ಸಿಬಿಐ ಇಂದು ತಾನು ಅದನ್ನು ವಾಪಸ್ ಪಡೆಯಲು ಬಯಸುವುದಾಗಿ ಸಿಬಿಐ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನವೀನ್ ಕುಮಾರ್ ಕಶ್ಯಪ್ ಬಳಿ ಹೇಳಿದೆ.

ಮುಂದಿನ ಕ್ರಮದ ಬಗ್ಗೆ ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದ್ದರೂ ಸದ್ಯದ ಮಟ್ಟಿಗೆ ಅಪೀಲು ವಾಪಸ್ ಪಡೆಯಬಯಸುವುದಾಗಿ ಸಿಬಿಐ ತಿಳಿಸಿದೆ. ಸಿಬಿಐ ಅಪೀಲಿಗೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಅಪೀಲುದಾರರಾಗಿರುವ ಸಿಬಿಐಗೆ ಅಪೀಲು ವಾಪಸ್ ಪಡೆಯುವ ಎಲ್ಲಾ ಹಕ್ಕುಗಳೂ ಇವೆ ಎಂದು ಹೇಳಿದರು.

ಬೋಫೋರ್ಸ್ ಪ್ರಕರಣದ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿ ದಿಲ್ಲಿ ಹೈಕೋರ್ಟ್ ಮೇ 31, 2005ರಂದು ನೀಡಿದ್ದ ಆದೇಶದ ವಿರುದ್ಧ ಸಿಬಿಐ ಫೆಬ್ರವರಿ 2, 2018ರಂದು ಸುಪ್ರೀಂ ಕೋರ್ಟಿನ ಕದ ತಟ್ಟಿದ್ದರೂ ಅದನ್ನು ನ್ಯಾಯಾಲಯ ನವೆಂಬರ್ 2ರಂದು ರದ್ದುಗೊಳಿಸಿತ್ತು. ಈ ಅಪೀಲು ಸಲ್ಲಿಸಲು ಸಿಬಿಐ 4,500 ದಿನಗಳಷ್ಟು ಏಕೆ ವಿಳಂಬ ಮಾಡಿತೆಂಬುದರ ಬಗ್ಗೆ ತನಿಖಾ ಏಜನ್ಸಿ ನೀಡಿದ ವಿವರಣೆ ತನಗೆ ಸಮಾಧಾನ ತಂದಿಲ್ಲ ಎಂದೂ ಸುಪ್ರೀಂ ಕೋರ್ಟ್ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News