ನಿಖರ ಚುನಾವಣಾ ಫಲಿತಾಂಶ ತಿಳಿಸಿದರೆ ಜ್ಯೋತಿಷಿಗಳಿಗೆ 1 ಕೋಟಿ ರೂ. ಬಹುಮಾನ: ವಿಚಾರವಾದಿ ಸಂಘದ ಸವಾಲು

Update: 2019-05-16 12:43 GMT

ಬೆಂಗಳೂರು, ಮೇ 16: ಚುನಾವಣಾ ಭವಿಷ್ಯ ಹೇಳುವ ಜ್ಯೋತಿಷಿಗಳು ಫಲಿತಾಂಶದ ಅಂಕಿ-ಅಂಶಗಳನ್ನು ಮುಂಚಿತವಾಗಿಯೇ ನಿಖರವಾಗಿ ಹೇಳಿದರೆ ಅಂತಹ ಜ್ಯೋತಿಷಿಗಳಿಗೆ 1 ಕೋಟಿ ರೂ. ಬಹುಮಾನ ನೀಡುವುದಾಗಿ ಅಖಿಲ ಕರ್ನಾಟಕ ವಿಚಾರವಾದಿ ಸಂಘ ಸವಾಲು ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎ.ಎಸ್. ನಟರಾಜ, ಇತ್ತೀಚೆಗೆ ಭವಿಷ್ಯ ಹೇಳುವ ಜ್ಯೋತಿಷಿಗಳ ಹಾವಳಿ ಹೆಚ್ಚಾಗಿದ್ದು, ಚುನಾವಣಾ ಸಂದರ್ಭದಲ್ಲಿ ಕೆಲವು ಜ್ಯೋತಿಷಿಗಳು ಮಾಧ್ಯಮದ ಮೂಲಕ ಇಂತಹ ಪಕ್ಷಗಳು, ಇಂತಹ ವ್ಯಕ್ತಿಗಳು ಗೆಲ್ಲುತ್ತಾರೆ ಎಂದು ಹೇಳುತ್ತಾ ಜನರನ್ನು ಮೌಢ್ಯದ ಕಡೆಗೆ ಕರೆದೊಯ್ಯುತ್ತಿರುವುದು ಸರಿಯಲ್ಲ ಎಂದು ಆರೋಪಿಸಿದರು.

2019ರ ಲೋಕಸಭಾ ಚುನಾವಣೆಯಲ್ಲಿ ದೇಶದ 543 ಲೋಕಸಭಾ ಕ್ಷೇತ್ರಗಳಲ್ಲಿ ಯಾವ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆ ಮತ್ತು ಎಷ್ಟು ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂಬುದರ ಬಗ್ಗೆ ಅಂಕಿ ಅಂಶಗಳ ಸಮೇತ ಮೇ 20ರೊಳಗೆ ನಮ್ಮ ಸಂಘಕ್ಕೆ 10 ಸಾವಿರ ಭದ್ರತಾ ಠೇವಣಿ ಮೂಲಕ ವರದಿ ಸಲ್ಲಿಸಬೇಕು. ಈ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಯಾವ ಜ್ಯೋತಿಷಿ ನಿಖರವಾದ ಫಲಿತಾಂಶದ ವರದಿ ನೀಡಿರುತ್ತಾರೆ ಅಂತಹವರಿಗೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ 1 ಕೋಟಿ ರೂ. ಬಹುಮಾನ ನೀಡಲು ಸಂಘ ನಿರ್ಧರಿಸಿದೆ ಎಂದರು.

ಜನರಲ್ಲಿ ಭಯ ಹಾಗೂ ಆಸೆ ಹುಟ್ಟಿಸುವ ಜ್ಯೋತಿಷಿಗಳು ಜನರನ್ನು ಶೋಷಣೆಗೆ ಒಳಪಡಿಸಿದ್ದಾರೆ. ಮೂಢನಂಬಿಕೆ, ಕಂದಾಚಾರಗಳಿಂದ ಜನರನ್ನು ವಂಚಿಸುವ ಜ್ಯೋತಿಷಿಗಳನ್ನು ನಂಬಬೇಡಿ. ಯಾವುದೇ ವ್ಯಕ್ತಿ ನಿಖರವಾಗಿ ಚುನಾವಣಾ ಫಲಿತಾಂಶದ ಅಂಕಿ ಅಂಶಗಳನ್ನು ಫಲಿತಾಂಶ ಪ್ರಕಟವಾಗುವ ಮುನ್ನ ತಿಳಿಸುವುದಕ್ಕೆ ಸಾಧ್ಯವೇ ಇಲ್ಲ ಎಂದು ಪ್ರತಿಪಾದಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾನವ ಹಕ್ಕುಗಳ ಹೋರಾಟಗಾರ ನರಸಿಂಹಮೂರ್ತಿ, ಕಾರ್ಯದರ್ಶಿ ನಾಗೇಶ ಅರಳಕುಟ್ಟಿ ಹಾಜರಿದ್ದರು.

ವಿಚಾರವಾದಿಗಳ ಬಹುಮಾನ: 

* ಮಾಜಿ ಸಚಿವೆ ಡಾ.ಲಲಿತಾ ನಾಯಕ್ 10,000 ರೂ. ಬಹುಮಾನದ ಸವಾಲು ಮೊ.ಸಂ: 94480 67193.

* ಮಾನವ ಹಕ್ಕು ಹೋರಾಟಗಾರ ಟಿ.ನರಸಿಂಹಮೂರ್ತಿ ಒಂದು ಲಕ್ಷ ರೂ ಹಾಗೂ ಚಿನ್ನದ ಉಂಗುರ ಬಹುಮಾನ. ಮೊ.ಸಂ: 9980627609.

* ಭಾರತೀಯ ವಿಚಾರವಾದಿಗಳ ಒಕ್ಕೂಟದ ಅಧ್ಯಕ್ಷ ಡಾ.ನರೇಂದ್ರ ನಾಯಕ 10 ಲಕ್ಷ ರೂ ಬಹುಮಾನ. ಮೊ.ಸಂ: 94482 16343.

ನಿಯಮಗಳು: 

* ದೇಶದ ಯಾವ ಜ್ಯೋತಿಷಿಯಾದರೂ ಭಾಗವಹಿಸಬಹುದು.

* ಪ್ರತಿ ಅರ್ಜಿಗೆ ಹತ್ತು ಸಾವಿರ ರೂ.ಗಳನ್ನು ಭದ್ರತಾ ಠೇವಣಿಯಾಗಿ ನೀಡಬೇಕಾಗುತ್ತದೆ.

* ಠೇವಣಿಯನ್ನು ವಿಚಾರವಾದಿ ಸಂಘ ಬೆಂಗಳೂರು ಹೆಸರಿಗೆ ಡಿಡಿ ಕಳುಹಿಸಬೇಕು.

* ಗೆದ್ದವರಿಗೆ ಠೇವಣಿ ಹಣ ಹಿಂತಿರುಗಿಸಿ, ಒಂದು ಕೋಟಿ ರೂ ಬಹುಮಾನ ನೀಡಲಾಗುವುದು.

* ಒಂದಕ್ಕಿಂತ ಹೆಚ್ಚು ಸ್ಪರ್ಧಿಗಳು ಸರಿ ಉತ್ತರ ಕೊಟ್ಟರೆ ಬಹುಮಾನ ಹಣವನ್ನು ಗೆದ್ದವರಿಗೆ ಸಮಾನ ಹಂಚಿಕೆ.

* ಸ್ಪರ್ಧೆಯ ಫಲಿತಾಂಶವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಜ್ಯೋತಿಷಿಗಳ ಹಾವಳಿ ದೇಶದಲ್ಲಿ ಹೆಚ್ಚಾಗಿದ್ದು, ಜನರನ್ನು ಮೂಢನಂಬಿಕೆಗೆ ತಳ್ಳಿ ಹಣ ಸಂಪಾದಿಸುವ ದಂಧೆ ಶುರುವಾಗಿದೆ. ಈ ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರವನ್ನು ನಿಷೇಧಿಸುವ ಅಗತ್ಯವಿದೆ. 

-ಬಿ.ಟಿ.ಲಲಿತಾ ನಾಯಕ್, ಮಾಜಿ ಸಚಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News