ವಚನ ಸಾಹಿತ್ಯದ ಬಗ್ಗೆ ಅಸಡ್ಡೆ ಬೇಡ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2019-05-16 12:45 GMT

ಬೆಂಗಳೂರು, ಮೇ 16: ಯುವ ಜನತೆಗೆ ವಚನ ಸಾಹಿತ್ಯದ ಬಗ್ಗೆ ಅಸಡ್ಡೆ ಬೇಡ. ಬದಲಾಗಿ ವಚನಗಳ ಮಹತ್ವವನ್ನು ಅರಿಯಲು ಮುಂದಾಗಲಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದರು.

ಗುರುವಾರ ಇಲ್ಲಿನ ಜಯನಗರದ ನ್ಯಾಷನಲ್ ಕಾಲೇಜಿನ ಎಚ್.ಎನ್. ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ, ‘ವಚನ ಸಾಹಿತ್ಯದ ಬಹುತ್ವದ ನೆಲೆಗಳು’ ವಿಷಯ ಕುರಿತು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಭಿನ್ನ ಮತ್ತು ಅತ್ಯಂತ ವಿಶಿಷ್ಟವಾದ ದಾಸ ಸಾಹಿತ್ಯ ಹಾಗೂ ವಚನ ಸಾಹಿತ್ಯಗಳು ಸರ್ವರ ಬಾಳು ಬೆಳಗುವಲ್ಲಿ ಪ್ರಮುಖವಾದವುಗಳು. ಆದರೆ, ಇಂದಿನ ಯುವ ಜನತೆ ಸಾಮಾಜಿಕ ಜಾಲತಾಣಗಳಿಗೆ ಮರುಳಾಗಿ ವಚನ ಸಾಹಿತ್ಯದ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ. ಆದರೆ, ಅವರಿಗೆ ವಚನಗಳ ಮಹತ್ವದ ಅರಿವನ್ನು ಮೂಡಿಸುವುದು ಅನಿವಾರ್ಯವಾಗಿದೆ ಎಂದರು.

ಶರಣರು ಬೋಧಿಸಿದ ಕಾಯಕ ತತ್ವವನ್ನು ಪ್ರತಿಯೊಬ್ಬರು ಅಳವಡಿಸಿಕೊಂಡಲ್ಲಿ ಸಮಾಜದಲ್ಲಿ ಸಮಾನತೆ ಶಾಂತಿ ನೆಲೆಗೊಳ್ಳುತ್ತದೆ. ಕಾಯಕ ತತ್ವವನ್ನು ಅನುಸರಿಸುವ ಮೂಲಕ ಆರ್ಥಿಕ ಸಂಕಷ್ಟ ಮತ್ತು ಬಡತನ ಜಂಜಾಟದಿಂದ ಹೊರಬಂದು ಆತ್ಮಶುದ್ಧಿಯೊಂದಿಗೆ ನೆಮ್ಮದಿಯ ಬದುಕನ್ನು ರೂಪಿಸಿಕೊಳ್ಳಬಹುದು ಎಂದು ನುಡಿದರು.

ಬೆಂಗಳೂರು ವಿವಿಯ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಗಂಗಾಂಧರ್ ಮಾತನಾಡಿ, ವಚನದ ತಾತ್ವಿಕ ಹಿನ್ನೆಲೆ ತಿಳಿಯುವುದರ ಜೊತೆಗೆ ವಚನ ಸಾಹಿತ್ಯ ಅಧ್ಯಯನ ಮಾಡುವ ಮೂಲಕ ಬಹುತ್ವದ ನೆಲೆಯನ್ನು ಸೃಷ್ಟಿಸಬೇಕಿದೆ. ಶರಣರ ತತ್ವ ಸಿದ್ಧಾಂತ, ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಇನ್ನೊಬ್ಬರಿಗೆ ಮಾರ್ಗದರ್ಶಿಗಳಾಗಬೇಕಿದೆ ಎಂದು ಹೇಳಿದರು.

12ನೇ ಶತಮಾನದಲ್ಲಿದಂತ ವೈಚಾರಿಕತೆ ಇಂದು ಮರೆಯಾಗುತ್ತಿದೆ. ವೈದಿಕದಿಂದ ವೈಚಾರಿಕತೆಗೆ ವಿಸ್ತರಿಸುವ ಕೆಲಸವನ್ನು ವಚನ ಸಾಹಿತ್ಯ ಮಾಡುತ್ತದೆ. ಪ್ರತಿಯೊಬ್ಬರು ಮನದ ಅಹಂ ತ್ಯಜಿಸಿ ಸಮಾನತೆ ತತ್ವ ಪಾಲಿಸಬೇಕು ಎಂದು ಕರೆ ನೀಡಿದರು.

ಬಸವ ವೇದಿಕೆ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮಾತನಾಡಿ, ಆತ್ಮಶುದ್ಧಿ, ಪರರ ಹಿತವನ್ನು ಬಯಸುವಂತ ಮನಸ್ಸು ನಮ್ಮದಾಗಬೇಕು. ದ್ವೇಷ, ಅಸೂಯೆಗಳನ್ನು ಒಳಗೊಂಡಿರುವರಲ್ಲಿ ಶರಣರು ಹುಟ್ಟಲಾರರು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಕಾಲೇಜಿನ ಮುಖ್ಯಸ್ಥ ಡಾ.ಗೋವಿಂದಶೆಟ್ಟಿ, ಕನ್ನಡ ಸಂಘದ ಸಂಚಾಲಕ ಡಾ.ಕೋ.ವೆಂ.ರಾಮಕೃಷ್ಣೇಗೌಡ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News