ಅಮಿತ್ ಶಾ ರೋಡ್ ಶೋ ನಲ್ಲಿ ಕಲ್ಲು ತೂರಾಟ: ಬಿಜೆಪಿ ಖಂಡನೆ

Update: 2019-05-16 12:48 GMT

ಬೆಂಗಳೂರು, ಮೇ 16: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೋಲ್ಕತಾ ನಗರದಲ್ಲಿ ನಡೆಸಿದ ಬೃಹತ್ ರೋಡ್ ಶೋ ವೇಳೆ ಟಿಎಂಸಿ ವಿದ್ಯಾರ್ಥಿ ಘಟಕವಾಗಿರುವ ‘ತೃಣಮೂಲ’ ಕಾಂಗ್ರೆಸ್ ವಿದ್ಯಾರ್ಥಿ ಪರಿಷತ್(ಟಿಎಂಸಿಸಿ) ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದ್ದು, ಘಟನೆಯನ್ನು ತೀವ್ರವಾಗಿ ಖಂಡಿಸಿದೆ.

ದೇಶದಲ್ಲಿ ಪ್ರಧಾನಿ ನರೇಂದ್ರಮೋದಿ ಅಲೆ ಹೆಚ್ಚಾಗಿರುವುದನ್ನು ಸಹಿಸಲಾಗದೇ ಹತಾಶರಾಗಿ ಕಾಂಗ್ರೆಸ್ ಮತ್ತು ಟಿಎಂಸಿ ಪಕ್ಷಗಳು ತಮ್ಮ ಕಾರ್ಯಕರ್ತರಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ರೋಡ್ ಶೋ ಸಂದರ್ಭದಲ್ಲಿ ಅವರ ಬೆಂಗಾವಲು ಪಡೆಯ ವಾಹನ, ಪೊಲೀಸ್ ಪಡೆ, ಮಾಧ್ಯಮದವರ ಮೇಲೆ ಕಲ್ಲು ತೂರಾಟ ನಡೆಸಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳ ರಾಜ್ಯದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಟಿಎಂಸಿ ನಾಯಕರು ತಮ್ಮ ಕಾರ್ಯಕರ್ತರಿಂದ ಕಪ್ಪು ಬಾವುಟ ಪ್ರದರ್ಶನ ಮಾಡಿಸುವ ಮೂಲಕ ಕೀಳುಮಟ್ಟದ ರಾಜಕೀಯ ಮಾಡುತ್ತಲೇ ಬಂದಿದ್ದಾರೆ ಎಂದು ಅವರು ದೂರಿದ್ದಾರೆ.

ಈ ಕೆಳಮಟ್ಟದ ರಾಜಕಾರಣ ಹೀನ ಕೆಲಸವನ್ನು ಇಡೀ ದೇಶದ ಜನತೆ ನೋಡುತ್ತಿದ್ದಾರೆ. ಮೇ 23ರಂದು ಹೊರಬೀಳುವ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ದೇಶದ ಜನರು ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ, ಸಂಬಂಧಿಸಿದ ಅಧಿಕಾರಿಗಳು ಕೋಲ್ಕತಾ ನಗರದಲ್ಲಿ ನಡೆದ ಗೂಂಡಾ ವರ್ತನೆ ನಡೆಸಿದ ಕಾಂಗ್ರೆಸ್ ಮತ್ತು ಟಿಎಂಸಿ ಬೆಂಬಲಿತ ಕಾರ್ಯಕರ್ತರ ಮೇಲೆ ಕ್ರಮ ಕೈಗೊಳ್ಳಬೇಕು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News