ಪಿಯು ಕಾಲೇಜುಗಳ ಕಟ್ ಆಫ್ ಅಂಕಗಳ ಮಾನದಂಡ ವಿಚಾರ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2019-05-16 15:42 GMT

ಬೆಂಗಳೂರು, ಮೇ 16: ಖಾಸಗಿ ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಶೇ.90 ಕಟ್ ಆಫ್ ಅಂಕಗಳ ಸ್ವಯಂಘೋಷಿತ ಮಾನದಂಡಗಳನ್ನು ರೂಪಿಸಿರುವುದು ಹಾಗೂ ಹೆಚ್ಚಿನ ಶುಲ್ಕ ನಿಗದಿಪಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಈ ಕುರಿತು ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರರು ಆಗಿರುವ ವಕೀಲ ಎನ್.ಪಿ.ಅಮೃತೇಶ್ ಅವರು ವಾದಿಸಿ, ರಾಜ್ಯದ ಖಾಸಗಿ ಪಿಯು ಕಾಲೇಜುಗಳು ವಿದ್ಯಾರ್ಥಿಗಳ ಪ್ರವೇಶಕ್ಕೆ ಶೇ.90 ಕಟ್ ಆಫ್ ಅಂಕಗಳನ್ನು ನಿಗದಿ ಮಾಡುವ ಮೂಲಕ ಹೊಸ ಮಾನದಂಡಗಳನ್ನು ರೂಪಿಸಿವೆ. ಶೇ.90ಕ್ಕಿಂತ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳಿಂದ ಮನಬಂದಂತೆ ಶುಲ್ಕ ಪಡೆಯುತ್ತವೆ. ಹೀಗಾಗಿ, ಖಾಸಗಿ ಕಾಲೇಜುಗಳಿಗೆ ಶುಲ್ಕ ನಿಗದಿಪಡಿಸಲು ರಾಜ್ಯ ಸರಕಾರಕ್ಕೆ ನಿರ್ದೇಶಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ರಾಜ್ಯ ಸರಕಾರ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ಎರಡು ವಾರದಲ್ಲಿ ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News