ಚಿಂಚೋಳಿ ಕ್ಷೇತ್ರದ ಜನ ನನ್ನನ್ನು ದತ್ತು ಪಡೆದಿದ್ದಾರೆ: ಪ್ರಿಯಾಂಕ್ ಖರ್ಗೆ

Update: 2019-05-16 15:46 GMT

ಕಲಬುರಗಿ, ಮೇ 16: ರಾಜಕೀಯ ಲಾಭಕ್ಕಾಗಿ ಉಮೇಶ್ ಜಾಧವ್ ಏನು ಬೇಕಾದರೂ ಮಾಡಲು ಸಿದ್ಧ. ಅವರು ಹೇಳಿದಂತೆ ನಾನು ಯಾವತ್ತೂ ಚಿಂಚೋಳಿಯನ್ನು ದತ್ತು ತೆಗೆದುಕೊಳ್ಳುತ್ತೇನೆ ಎಂದು ಹೇಳಿರಲಿಲ್ಲ. ಈ ಕ್ಷೇತ್ರದ ಜನರೇ ನನ್ನನ್ನು ದತ್ತು ತೆಗೆದುಕೊಂಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಂಚೋಳಿ ಕ್ಷೇತ್ರದ ಜನ ಗುಳೇ ಹೋಗುತ್ತಿದ್ದಾರೆಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಇದಕ್ಕೆ ಕಾರಣ ಯಾರು? ಅನ್ನೋದನ್ನು ಹೇಳಲಿ ಎಂದರು.

ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯಕ್ಕೆ ನೀಡಬೇಕಿರುವ ಅನುದಾನವನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿಲ್ಲ. ಇದರಿಂದಾಗಿ, ಜನರು ಉದ್ಯೋಗಗಳನ್ನು ಹುಡುಕಿಕೊಂಡು ಗುಳೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಕಿಡಿಗಾರಿದರು.

ಉಮೇಶ್ ಜಾಧವ್ ಮೆದುಳಿಗೆ ಮತ್ತು ನಾಲಿಗೆಗೆ ಸಂಪರ್ಕ ಇಲ್ಲದಂತಾಗಿದೆ. ಚಿಂಚೋಳಿ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಲು ಬಿಜೆಪಿ ಮತ್ತು ಉಮೇಶ್ ಜಾಧವ್ ಕಾರಣ. ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಈಗಷ್ಟೇ ಪರೀಕ್ಷೆ ಬರೆದಿದ್ದಾನೆ. ಆತ ಇನ್ನು ಕೂಸು. ಆತನ ಬಗ್ಗೆ ನಾನು ಏನು ಮಾತನಾಡುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ನಮ್ಮ ಅಭ್ಯರ್ಥಿ ಸುಭಾಷ್ ರಾಠೋಡ್ ಕಾನೂನು ಪದವೀಧರರಾಗಿದ್ದು, ಈ ಭಾಗದ ಜನರ ಸುಖ, ದುಃಖಗಳಲ್ಲಿ ಭಾಗಿಯಾಗಿದ್ದಾರೆ. ಅಂತಹ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ, ಪಕ್ಷಾಂತರಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News