ಬೆಂಗಳೂರು: ವಿದ್ಯುತ್ ತಂತಿ ತಗುಲಿ ಬಾಲಕ ಗಂಭೀರ

Update: 2019-05-16 15:53 GMT

ಬೆಂಗಳೂರು, ಮೇ 16: ಬಿಬಿಎಂಪಿ ಮತ್ತು ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮತ್ತೊಬ್ಬ ಬಾಲಕನಿಗೆ ವಿದ್ಯುತ್ ತಗುಲಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ಮತ್ತಿಕೆರೆ ವ್ಯಾಪ್ತಿಯಲ್ಲಿ ನಡೆದಿದೆ.

ಮತ್ತಿಕೆರೆಯ ರಮಾದೇವಿ ಮತ್ತು ಅಂಬರೀಶ್ ದಂಪತಿಯ ಪುತ್ರ ನಿಖಿಲ್(14) ಗಾಯಗೊಂಡ ಬಾಲಕನಾಗಿದ್ದು, ಯಲಹಂಕದ ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ 9ನೇ ತರಗತಿಗೆ ಪ್ರವೇಶ ಪಡೆದಿದ್ದ ಎಂದು ತಿಳಿದುಬಂದಿದೆ.

ಏನಿದು ಘಟನೆ?: ನಗರದ ಮತ್ತಿಕೆರೆಯ ನೇತಾಜಿ ವೃತ್ತದ ಮನೆ ಬಳಿ ಸ್ನೇಹಿತರೊಡನೆ ಲಿಖಿತ್ ಆಡುವಾಗ ಕಟ್ಟಡದ ಮೊದಲ ಮಹಡಿಗೆ ಚಂಡು ಹೋಗಿದ್ದು, ಈ ವೇಳೆ ಅದನ್ನು ತರಲು ಹೋಗಿದ್ದ ಲಿಖಿತ್‌ಗೆ ತಂತಿ ತುಳಿದು ಕೆಳಗೆ ಬಿದ್ದಿದ್ದಾನೆ ಎನ್ನಲಾಗಿದೆ.

ತಕ್ಷಣ ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಿಖಿತ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಆತನ ದೇಹ ಶೇ.40 ರಷ್ಟು ಸುಟ್ಟುಹೋಗಿದೆ ಎಂದು ಹೇಳಲಾಗುತ್ತಿದೆ.

ಆಕ್ರೋಶ: ಆಸ್ಪತ್ರೆ ಮುಂದೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ರಸ್ತೆ ಮೇಲೆ ಕೇಬಲ್ ವೈಯರ್ ಜತೆಗೆ, ವಿದ್ಯುತ್ ತಂತಿ ಕೂಡ ನೆಲಕ್ಕೆ ಬಿದ್ದಿತ್ತು. ಇದನ್ನು ಯಾರು ಗಮನಿಸದ ಕಾರಣ ಈ ಅವಘಡ ಸಂಭವಿಸಿದೆ. ವಿದ್ಯುತ್ ಅವಘಡ ಸಂಭವಿಸಿದ ಜಾಗದಲ್ಲಿ 1 ಗಂಟೆಯಿಂದ ವಿದ್ಯುತ್ ಕಡಿತಗೊಂಡಿತ್ತು. ಅಲ್ಲದೆ ಘಟನೆಯಿಂದ ಸ್ಥಳದ ಸುತ್ತಮುತ್ತಲ 10 ಕ್ಕೂ ಹೆಚ್ಚು ಮನೆಗಳ ಮೀಟರ್ ಸುಟ್ಟು ಹೋಗಿದೆ. ಬೆಸ್ಕಾಂ ನಿರ್ಲಕ್ಷದಿಂದಾಗಿ ವಿದ್ಯುತ್ ತಂತಿ ತುಳಿದು ಬಾಲಕ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಇದರಿಂದ ಸಿಟ್ಟಿಗೆದ್ದಿರುವ ಸಾರ್ವಜನಿಕರು ಬೆಸ್ಕಾಂ ಹಾಗೂ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸೂಕ್ತ ಕ್ರಮ: ಮೇಯರ್ ಗಂಗಾಂಬಿಕೆ

ವಿದ್ಯುತ್ ತಂತಿ ತಗುಲಿ ಬಾಲಕ ಗಂಭೀರ ಪ್ರಕರಣ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಜೊತೆಗೆ, ಬಾಲಕ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುವುದು ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ತಿಳಿಸಿದರು.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈ ಬಗ್ಗೆ ನಗರಾಭಿವೃದ್ಧಿ ಸಚಿವರ ನೇತೃತ್ವದಲ್ಲಿ ಕೆಪಿಟಿಸಿಎಲ್, ಬೆಸ್ಕಾಂನ ಉನ್ನತ ಅಧಿಕಾರಿಗಳ ಸಹಿತ ಸಭೆಯನ್ನು ನಡೆಸಿ ಯಾವ ರೀತಿ ಕ್ರಮ ಹಾಗೂ ಮುಂದಿನ ಸುರಕ್ಷತಾ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಚರ್ಚಿಸಲಾಗುವುದೆಂದರು. ಬಾಲಕ ನಿಖಿಲ್ ಅವರ ಸಂಪೂರ್ಣ ವೈದ್ಯಕೀಯ ಚಿಕಿತ್ಸೆ ವೆಚ್ಚವನ್ನು ಪಾಲಿಕೆ ಭರಿಸಲಿದೆ ಎಂದ ಅವರು, ಸದ್ಯದ ಮಟ್ಟಿಗೆ ನಿಖಿಲ್ ಸ್ಪಷ್ಟವಾಗಿ ಮಾತನಾಡುತ್ತಿದ್ದಾನೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News