ಹಣ ವಸೂಲಿ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ- ಡಾ.ಶಿವರಾಜ್ ಸಜ್ಜನ್ ಶೆಟ್ಟಿ

Update: 2019-05-16 16:28 GMT

ಬೆಂಗಳೂರು, ಮೇ 16: ಡೆಂಗ್ ಚಿಕಿತ್ಸೆಗಾಗಿ ಹೆಚ್ಚಿನ ಹಣ ವಸೂಲಿ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ರಾಜ್ಯ ಸರಕಾರ ಕ್ರಮ ಕೈಗೊಂಡಿದೆ ಎಂದು ಆರೋಗ್ಯ ಇಲಾಖೆಯ ಸಾಂಕ್ರಾಮಿಕ ರೋಗ ವಿಭಾಗದ ಜಂಟಿ ನಿರ್ದೇಶಕ ಡಾ.ಶಿವರಾಜ್ ಸಜ್ಜನ್ ಶೆಟ್ಟಿ ತಿಳಿಸಿದರು.

ಗುರುವಾರ ನಗರದ ಕೆಆರ್ ರಸ್ತೆಯ ಐಎಂಎ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಆಯೋಜಿಸಿದ್ದ, ರಾಷ್ಟ್ರೀಯ ಡೆಂಗ್ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಡೆಂಗ್ ರೋಗಾಣು ಪತ್ತೆ ಸಂಬಂಧ ರಕ್ತ ಪರೀಕ್ಷೆ ಸೇರಿದಂತೆ ಇನ್ನಿತರ ವೈದ್ಯಕೀಯ ಸೇವೆಗಳಿಗೆ ಖಾಸಗಿ ಆಸ್ಪತ್ರೆಗಳು ದುಬಾರಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದವು. ತದನಂತರ, ಸರಕಾರ ಅಗತ್ಯ ಕ್ರಮ ಕೈಗೊಳ್ಳುವ ಜತೆಗೆ ದರ ನಿಗದಿಗೊಳಿಸಿ ಕಡಿವಾಣ ಹಾಕಿದೆ ಎಂದರು.

ಕೇಂದ್ರ ಮತ್ತು ರಾಜ್ಯ ಸರಕಾರ ಡೆಂಗ್ ತಡೆಗಟ್ಟಲು ಅನೇಕ ಪರಿಣಾಮಕಾರಿ ಕಾರ್ಯಕ್ರಮಗಳನ್ನು ರೂಪಿಸಿದ್ದು, ಇದರಿಂದ ಡೆಂಗ್ ಪ್ರಕರಣಗಳು ಯಶಸ್ವಿಯಾಗಿ ಇಳಿಮುಖ ಕಾಣುತ್ತಿದೆ. ಇದಕ್ಕಾಗಿ ತಳಮಟ್ಟದಲ್ಲಿ ಆಶಾ ಕಾರ್ಯಕರ್ತರು ಹೆಚ್ಚು ಶ್ರಮಿಸುತ್ತಿದ್ದಾರೆ ಎಂದು ಸಜ್ಜನ್ ಶೆಟ್ಟಿ ನುಡಿದರು.

ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರದಂತೆ ತಡೆಯುವುದೇ ಸೂಕ್ತ. ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ರೋಗಬರದಂತೆ ಮುನ್ನಚ್ಚೆರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಎಚ್.ಎಸ್.ಸತೀಶ್, ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ.ಸಿ.ಆರ್. ಜಯಂತಿ, ಸಂಶೋಧನಾ ಅಧಿಕಾರಿ ಡಾ.ಮುಹಮ್ಮದ್ ಶರೀಫ್ ಸೇರಿದಂತೆ ಪ್ರಮುಖರಿದ್ದರು.

ತಗ್ಗಿದ ಡೆಂಗ್ ಪ್ರಮಾಣ

2018ರ ನವಂಬರ್ ಅಂತ್ಯದೊಳಗೆ ದೇಶ ವ್ಯಾಪ್ತಿಯಲ್ಲಿ ಬರೋಬ್ಬರಿ 89,974 ಡೆಂಗ್ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದರಲ್ಲಿ 144 ಮಂದಿ ಅಸುನೀಗಿದರು. ಕರ್ನಾಟಕದಲ್ಲಿ ಪ್ರಸ್ತುತ ಸಾಲಿನ ಎಪ್ರಿಲ್ ತಿಂಗಳವರೆಗಿನ ವರದಿ ಪ್ರಕಾರ, 716 ಡೆಂಗ್ ಪ್ರಕರಣಗಳು ಬೆಳಕಿಗೆ ಬಂದಿದ್ದು, ಯಾರು ಮೃತಪಟ್ಟಿಲ್ಲ ಎಂದು ಆರೋಗ್ಯ ಇಲಾಖೆ ನಡೆಸಿರುವ ಸಮೀಕ್ಷೆಯಲ್ಲಿ ಉಲ್ಲೇಖವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News