ಎಸ್ಸಿ-ಎಸ್ಟಿ ನೌಕರರಿಗೆ ಭಡ್ತಿ ಮೀಸಲಾತಿ ಶೀಘ್ರ ಅನುಷ್ಠಾನಗೊಳಿಸಲು ದಸಂಒ ಒತ್ತಾಯ

Update: 2019-05-16 16:29 GMT

ಬೆಂಗಳೂರು, ಮೇ 16: ಎಸ್ಸಿ- ಎಸ್ಟಿ ನೌಕರರಿಗೆ ಭಡ್ತಿಯಲ್ಲಿ ಮೀಸಲಾತಿ ಸೌಕರ್ಯ ಕಲ್ಪಿಸುವಂತೆ ಸುಪ್ರೀಂ ಕೋರ್ಟ್ ತೀರ್ಪನ್ನು ರಾಜ್ಯ ಸರಕಾರ ಶೀಘ್ರವಾಗಿ ಅನುಷ್ಠಾನಗೊಳಿಸಬೇಕೆಂದು ರಾಜ್ಯ ದಲಿತ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಎಸ್‌ಸಿ-ಎಸ್ಟಿ ನೌಕರರಿಗೆ ಭಡ್ತಿಯಲ್ಲಿ ಮೀಸಲಾತಿ ಸೌಕರ್ಯ ಕಲ್ಪಿಸುವ ಕರ್ನಾಟಕ ಸರಕಾರದ ಭಡ್ತಿ ಮೀಸಲಾತಿ ಕಾಯ್ದೆ 2017ರ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದನ್ನು ನಮ್ಮ ಒಕ್ಕೂಟ ಸ್ವಾಗತಿಸುತ್ತದೆ ಎಂದು ತಿಳಿಸಿದರು.

ಶಿಕ್ಷಣ ಉದ್ಯೋಗದಲ್ಲಿ ದಲಿತ ಸಮುದಾಯಗಳಿಗೆ ಸಮಾನ ಅವಕಾಶವನ್ನು ಕಲ್ಪಿಸುವುದರಲ್ಲಿ ಸದಾ ಮುಂಚೂಣಿಯಲ್ಲಿರುವ ರಾಜ್ಯವು, 1978ರ ಹೊತ್ತಿಗೆ ಮೀಸಲಾತಿ ತೀವ್ರ ಕೊರತೆ ಎದ್ದು ಕಾಣುತ್ತಿತ್ತು. ಇದರಿಂದ ದಲಿತ ಸಮುದಾಯಕ್ಕೆ ಅನ್ಯಾಯವಾದ ಪರಿಣಾಮ ಅಂದಿನಿಂದ ಇಲ್ಲಿಯ ತನಕ ಮೀಸಲಾತಿಯ ಸಮರ್ಪಕ ಅನುಷ್ಠಾನ ಮತ್ತು ಭಡ್ತಿ ಮೀಸಲಾತಿ ಜಾರಿಗೆ ಆಗ್ರಹಿಸಿ ರಾಜ್ಯಾದ್ಯಂತ ಹಲವು ಬಾರಿ ಪ್ರತಿಭಟನೆ ನಡೆಸಲಾಗಿತ್ತು ಎಂದರು.

ದಲಿತರ ಸಮಸ್ಯೆಯನ್ನು ಆಲಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧಿಕಾರದ ಅವಧಿಯಲ್ಲಿ ಭಡ್ತಿ ಮೀಸಲಾತಿ ಕಾಯ್ದೆಗೆ ಸಂಬಂಧಿಸಿದ ಎಲ್ಲಾ ತೊಡಕುಗಳನ್ನು ಅಳಿಸಿ ಹಾಕುವಂತೆ 2017 ರಲ್ಲಿ ಹೊಸ ಭಡ್ತಿ ಮೀಸಲಾತಿ ಕಾಯ್ದೆಗೆ ಶಾಸನ ಸಭೆಯಲ್ಲಿ ಅನುಮೋದನೆ ಪಡೆದರು. ಆದರೆ ವಿರೋಧ ಪಕ್ಷಗಳ ಅಸಹಕಾರದ ಪರಿಣಾಮ ಸುಪ್ರೀಂ ಕೋರ್ಟ್‌ಗೆ ಈ ವರದಿ ಕಳುಹಿಸಲಾಯಿತು. ಸುದೀರ್ಘ ಪರಿಶೀಲನೆಯ ನಂತರ ಸುಪ್ರೀಂ ಕೋರ್ಟ್ ಭಡ್ತಿ ಮೀಸಲಾತಿ ಕಾಯ್ದೆ ಅನುಷ್ಠಾನಗೊಳಿಸುವಂತೆ ತೀರ್ಪು ನೀಡಿತ್ತು. ಆದ್ದರಿಂದ ಕರ್ನಾಟಕ ರಾಜ್ಯ ಸರಕಾರ ಕೂಡಲೇ ಈ ತೀರ್ಪನ್ನು ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News