ಕೆಜಿಎಸ್ ಕ್ಲಬ್ ಕಟ್ಟಡದಲ್ಲಿ ಕಾನೂನು ಬಾಹಿರ ಈಜುಕೊಳ ನಿರ್ಮಾಣ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2019-05-16 17:13 GMT

ಬೆಂಗಳೂರು, ಮೇ 16: ಕಬ್ಬನ್ ಪಾರ್ಕ್‌ನಲ್ಲಿರುವ ಕೆಜಿಎಸ್ ಕ್ಲಬ್ ಕಟ್ಟಡ ಭೋಗ್ಯಕ್ಕೆ ನೀಡಿದ್ದ ಅವಧಿ ಮುಗಿದಿದ್ದರೂ ಕಾನೂನು ಬಾಹಿರವಾಗಿ ಈಜುಕೊಳ ಸೇರಿ ಇನ್ನಿತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ಅವಕಾಶ ನೀಡಬಾರದೆಂದು ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ. 

ಈ ಕುರಿತು ಎಂ.ಕೆ.ನಿಯಾಝುದ್ದೀನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರ ನಿಯಾಝದ್ದೀನ್ ಪರ ವಾದಿಸಿದ ವಕೀಲ ಎಂ.ಕೆ.ಗಿರೀಶ್ ಅವರು, ಕಬ್ಬನ್ ಪಾರ್ಕ್‌ನಲ್ಲಿರುವ ಕೆಜಿಎಸ್ ಕ್ಲಬ್ ಕಟ್ಟಡವನ್ನು ಭೋಗ್ಯಕ್ಕೆ ಪಡೆದಿದ್ದ ಅವಧಿ ಈಗಾಗಲೇ ಮುಗಿದಿದೆ ಆದರೂ ಕೆಜಿಎಸ್ ಕ್ಲಬ್‌ನಲ್ಲಿ ಕಾನೂನು ಬಾಹಿರವಾಗಿ ಈಜುಗೊಳ ಸೇರಿ ಇನ್ನಿತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಹಾಗೂ ಕಬ್ಬನ್ ಪಾರ್ಕ್‌ನಲ್ಲಿ ಯಾವುದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಾದರೂ ಹೈಕೋರ್ಟ್‌ನ ಅನುಮತಿ ಪಡೆಯಬೇಕು. ಆದರೆ, ಯಾವುದೇ ಅನುಮತಿಯನ್ನು ಪಡೆಯದೆ ಕಾನೂನು ಬಾಹಿರವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ಕಾನೂನು ಬಾಹಿರವಾಗಿ ಕೈಗೆತ್ತಿಗೊಳ್ಳುತ್ತಿರುವ ಎಲ್ಲ ಕಾಮಗಾರಿಗಳು ತಡೆ ನೀಡಬೇಕು. ಹಾಗೂ ಕೆಜಿಎಸ್ ಕ್ಲಬ್‌ನ ಕಟ್ಟಡವನ್ನು ಸರಕಾರ ತನ್ನ ವಶಕ್ಕೆ ಪಡೆಯಲು ನಿರ್ದೇಶಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News