ಪ್ರಧಾನಿಯನ್ನು ಗೂಂಡಾ ಎಂದ ಮಮತಾ ವಿರುದ್ಧ ಆಯೋಗ ಕ್ರಮ ಕೈಗೊಳ್ಳಬೇಕು: ಜಾವಡೇಕರ್

Update: 2019-05-16 17:39 GMT

ಹೊಸದಿಲ್ಲಿ, ಮೇ 16: ಪ್ರಧಾನಮಂತ್ರಿಯನ್ನು ಗೂಂಡಾ ಎಂದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಆಗ್ರಹಿಸಿದ್ದಾರೆ.

ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾರನ್ನು ಗೂಂಡಾಗಳು ಎಂದು ಕರೆದಿದ್ದ ಮಮತಾ ಬ್ಯಾನರ್ಜಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಮನವಿಯೊಂದಿಗೆ ಚುನಾವಣಾ ಆಯೋಗವನ್ನು ಭೇಟಿ ಮಾಡಿದ ಬಿಜೆಪಿ ನಿಯೋಗದ ಅಧ್ಯಕ್ಷತೆ ವಹಿಸಿದ್ದ ಜಾವಡೇಕರ್ ಆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವ್ಯವಸ್ಥೆಯನ್ನು ಹದಗೆಡಿಸುತ್ತಿರುವ ಟಿಎಂಸಿ ಗೂಂಡಾಗಳನ್ನು ಮತದಾನದ ಮುನ್ನಾ ದಿನ ಮುಂಜಾಗರೂಕತಾ ಕ್ರಮವಾಗಿ ಕಸ್ಟಡಿಗೆ ಪಡೆಯಬೇಕು. ಮತದಾನದಂದು ಬಲವಂತವಾಗಿ ಮತಗಟ್ಟೆಯೊಳಗೆ ನುಗ್ಗುವ ಟಿಎಂಸಿ ಗೂಂಡಾಗಳು ಪೊಲೀಸರೆದುರೇ ಮತಯಂತ್ರದ ಬಟನ್ ಒತ್ತುತ್ತಿರುವ ಬಗ್ಗೆ ನಮ್ಮಲ್ಲಿ ವೀಡಿಯೊ ಸಾಕ್ಷಿಯಿದೆ. ಆದ್ದರಿಂದ ನ್ಯಾಯಸಮ್ಮತ ಹಾಗೂ ಹಿಂಸಾಚಾರ ಮುಕ್ತ ಮತದಾನ ನಡೆಯಬೇಕಿದ್ದರೆ ಟಿಎಂಸಿ ಗೂಂಡಾಗಳು ಹಾಗೂ ಕಿಡಿಗೇಡಿಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಬೇಕು ಎಂದು ಆಯೋಗವನ್ನು ಒತ್ತಾಯಿಸಿರುವುದಾಗಿ ಜಾವಡೇಕರ್ ಹೇಳಿದ್ದಾರೆ. ದೇಶದ ಎಲ್ಲಾ ರಾಜ್ಯಗಳಲ್ಲಿ ಶಾಂತಿಯುತ ಮತದಾನ ನಡೆದಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಇದಕ್ಕೆ ಟಿಎಂಸಿ ಗೂಂಡಾಗಳು ಆಸ್ಪದ ನೀಡುತ್ತಿಲ್ಲ ಎಂದವರು ಆರೋಪಿಸಿದರು.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸ್ಥಳೀಯಾಡಳಿತ ವಿಫಲವಾಗಿರುವ ಹಿನ್ನೆಲೆಯಲ್ಲಿ ಸೂಕ್ತ ಪ್ರಮಾಣದಲ್ಲಿ ಕೇಂದ್ರ ಪಡೆಗಳನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸುವಂತೆ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ. ಈಗಾಗಲೇ 400 ಕ್ಷಿಪ್ರ ಕಾರ್ಯಪಡೆ ತಂಡವನ್ನು ನಿಯೋಜಿಸಲಾಗಿದ್ದು ಮತದಾನದ ಸಂದರ್ಭ ಯಾವುದಾದರೂ ಸಮಸ್ಯೆ ಎದುರಾದರೆ ತಕ್ಷಣ ಈ ತಂಡವನ್ನು ಸಂಪರ್ಕಿಸುವಂತೆ ಜನತೆಗೆ ಮಾಹಿತಿ ನೀಡಬೇಕು ಎಂದು ನಿಯೋಗದಲ್ಲಿದ್ದ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದರು. ಪಶ್ಚಿಮ ಬಂಗಾಳದಲ್ಲಿ 9 ಸಂಸದೀಯ ಕ್ಷೇತ್ರಗಳಿಗೆ ಮೇ 19ರಂದು ಮತದಾನ ನಡೆಯಲಿದೆ. ಈ ಕ್ಷೇತ್ರಗಳ ಚುನಾವಣಾ ಪ್ರಚಾರ ಕಾರ್ಯ ಮೇ 17ರಂದು ಅಂತ್ಯವಾಗಬೇಕಿತ್ತು. ಆದರೆ ಮೇ 16ರಂದೇ ಪ್ರಚಾರ ಕಾರ್ಯ ಅಂತ್ಯಗೊಳಿಸಲು ಚುನಾವಣಾ ಆಯೋಗ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News