ಫ್ಲ್ಯಾಟ್ ಖರೀದಿಸುವವರಿಗೆ ಸಿಹಿ ಸುದ್ದಿ...

Update: 2019-05-17 05:55 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಹೊಸ ಫ್ಲ್ಯಾಟ್‌ಗೆ ಮುಂಗಡ ಹಣ ಪಾವತಿಸಿ ವರ್ಷಗಟ್ಟಲೆ ಕಾಯುವ ಸ್ಥಿತಿ ಎದುರಿಸುವ ಗ್ರಾಹಕರಿಗೆ ಗ್ರಾಹಕ ಆಯೋಗ ಸಿಹಿ ಸುದ್ದಿ ನೀಡಿದೆ.

ವಿಳಂಬವಾದ ಯೋಜನೆಗಳನ್ನು ಪೂರ್ಣಗೊಳಿಸಲು ಒಂದು ವರ್ಷದ ಕಾಲಾವಕಾಶ ನೀಡಿದ್ದು, ಈ ಅವಧಿಯಲ್ಲಿ ಪೂರ್ಣಗೊಳ್ಳದಿದ್ದಲ್ಲಿ ಹೂಡಿಕೆದಾರರು ತಮ್ಮ ಮುಂಗಡ ಹಣವನ್ನು ಮರುಪಾವತಿಸುವಂತೆ ಬಿಲ್ಡರ್‌ಗಳಿಗೆ ಕ್ಲೇಮ್ ಸಲ್ಲಿಸಬಹುದಾಗಿದೆ.

ಮನೆ ಖರೀದಿಗೆ ಹಣ ಪಾವತಿಸಿದ ಗ್ರಾಹಕರು ಅನಿರ್ದಿಷ್ಟಾವಧಿ ಕಾಯಲಾಗದು ಎಂದು ಸುಪ್ರೀಂಕೋರ್ಟ್ ಹಾಗೂ ಗ್ರಾಹಕ ನ್ಯಾಯಾಲಯಗಳು ಪದೇಪದೇ ಎಚ್ಚರಿಕೆ ನೀಡುತ್ತಲೇ ಬಂದಿದ್ದವು. ಆದರೆ ವಿಳಂಬವಾದ ಪ್ರಕರಣಗಳಲ್ಲಿ ಮರುಪಾವತಿ ಪಡೆಯುವ ಸಂಬಂಧ ಯಾವುದೇ ಸ್ಪಷ್ಟತೆ ಇರಲಿಲ್ಲ.

ಇದೀಗ ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಪ್ರೇಮ್ ನಾರಾಯಣ್ ನೇತೃತ್ವದ ಪೀಠ "ಬಿಲ್ಡರ್‌ಗಳು ಫ್ಲ್ಯಾಟ್ ಪೂರ್ಣಗೊಳಿಸುವ ಭರವಸೆ ನೀಡಿದ ದಿನಾಂಕ ಕಳೆದು ಒಂದು ವರ್ಷದ ಒಳಗಾಗಿ ಯೋಜನೆ ಪೂರ್ಣಗೊಳಿಸದಿದ್ದರೆ, ಗ್ರಾಹಕರು ತಮ್ಮ ಹಣ ಮರುಪಾವತಿ ಮಾಡುವಂತೆ ಕ್ಲೇಮ್ ಸಲ್ಲಿಸಬಹುದಾಗಿದೆ" ಎಂದು ಸ್ಪಷ್ಟಪಡಿಸಿದೆ.

ದೆಹಲಿ ನಿವಾಸಿ ಶಲಭ್ ನಿಗಮ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠ ಈ ಮಹತ್ವದ ಆದೇಶ ನೀಡಿದೆ. ನಿಗಮ್ 2012ರಲ್ಲಿ ಐಷಾರಾಮಿ ಗೃಹಯೋಜನೆಯಾದ ಗ್ರೀನೊಪೊಲೀಸ್‌ನಲ್ಲಿ ಫ್ಲ್ಯಾಟ್ ಖರೀದಿಸಿದ್ದರು. ಓರೀಸ್ ಇನ್‌ಫ್ರಾಸ್ಟ್ರಕ್ಚರ್ ಮತ್ತು 3ಸಿ ಕಂಪನಿ ಈ ಯೋಜನೆ ಅಭಿವೃದ್ಧಿ ಪಡಿಸುತ್ತಿದ್ದವು. ಫ್ಲ್ಯಾಟ್‌ನ ಬೆಲೆಯಾದ ಒಂದು ಕೋಟಿ ರೂಪಾಯಿಯ ಪೈಕಿ ನಿಗಮ್ 90 ಲಕ್ಷ ಪಾವತಿಸಿದ್ದರು. ಒಪ್ಪಂದದ ಪ್ರಕಾರ 36 ತಿಂಗಳುಗಳ ಒಳಗಾಗಿ ಫ್ಲ್ಯಾಟ್ ನೀಡಬೇಕಿತ್ತು ಹಾಗೂ ಆರು ತಿಂಗಳು ಹೆಚ್ಚುವರಿ ಅವಧಿ ನಿಗದಿಪಡಿಸಲಾಗಿತ್ತು. ಇದಕ್ಕೆ ಸಂಸ್ಥೆ ವಿಫಲವಾದ ಹಿನ್ನೆಲೆಯಲ್ಲಿ ವಕೀಲ ಆದಿತ್ಯ ಪರೋಲಿಯಾ ಮೂಲಕ ಆಯೋಗಕ್ಕೆ ದೂರು ನೀಡಿದ್ದರು. ತಕ್ಷಣ ಹಣ ಮರುಪಾವತಿ ಮಾಡಲು ಅಥವಾ ಕಾಲಮಿತಿಯಲ್ಲಿ ಫ್ಲ್ಯಾಟ್ ಪೂರೈಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲು ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News