ಮಾಲೆಗಾಂವ್ ಸ್ಫೋಟ ಪ್ರಕರಣ: ವಾರಕ್ಕೊಮ್ಮೆ ಕೋರ್ಟ್ ಗೆ ಹಾಜರಾಗಲು ಪ್ರಜ್ಞಾ ಸಿಂಗ್ ಗೆ ಸೂಚನೆ

Update: 2019-05-17 15:34 GMT

ಮುಂಬೈ, ಮೇ 17: ತನ್ನ ಮುಂದೆ ವಾರಕ್ಕೊಮ್ಮೆ ಹಾಜರಾಗುವಂತೆ ಮಾಲೇಗಾಂವ್ ಸ್ಫೋಟ ಪ್ರಕರಣದ ಆರೋಪಿ, ಭೋಪಾಲದ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್ ಹಾಗೂ ಇತರ ಆರೋಪಿಗಳಿಗೆ ವಿಶೇಷ ಎನ್‌ಐಎ ನ್ಯಾಯಾಲಯ ನಿರ್ದೇಶಿಸಿದೆ. ಪ್ರಜ್ಞಾ ಸಿಂಗ್ ಠಾಕೂರ್ ವಿಚಾರಣೆಗೆ ಹಾಜರಾಗದಿರುವ ಬಗ್ಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ಸಮರ್ಪಕ ಕಾರಣವಿಲ್ಲದೆ ಹಾಜರಾಗಲು ವಿನಾಯತಿ ಕೋರುವುದನ್ನು ತಿರಸ್ಕರಿಸಲಾಗುವುದು ಎಂದು ನ್ಯಾಯಮೂರ್ತಿ ವಿನೋದ್ ಪದಾಲ್ಕರ್ ಸೂಚಿಸಿದ್ದಾರೆ. ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್, ಮೇಜರ್ (ನಿವೃತ್ತ) ರಮೇಶ್ ಉಪಾಧ್ಯಾಯ, ಅಜಯ್ ರಾಹಿರ್ಕರ್, ಸುಧಾಕರ್ ದ್ವಿವೇದಿ, ಸುಧಾಕರ ಚತುರ್ವೇದಿ ಹಾಗೂ ಸಮೀರ್ ಕುಲಕರ್ಣಿ ಇತರ ಆರೋಪಿಗಳು. ಎಲ್ಲ ಆರೋಪಿಗಳು ಜಾಮೀನನಲ್ಲಿ ಹೊರಗಿದ್ದಾರೆ. ಎನ್‌ಐಎಗೆ ಎಟಿಎಸ್‌ನ ನೆರವು ನೀಡುವಂತೆ ಕೋರಿ ಮಾಲೇಗಾಂವ್ ಸ್ಫೋಟದಲ್ಲಿ ಮೃತಪಟ್ಟ ಸೈಯದ್ ಅಝರ್ ಅವರ ತಂದೆ ನಿಸಾರ್ ಅಹ್ಮದ್ ಸೈಯದ್ ಬಿಲಾಲ್ ಎನ್‌ಐಎ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, ಈ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.

ಪ್ರಜ್ಞಾ ಸಿಂಗ್ ಠಾಕೂರ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ತಡೆ ನೀಡುವಂತೆ ಕೂಡ ಬಿಲಾಲ್ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಅದಕ್ಕೆ ನ್ಯಾಯಾಲಯ, ಇದು ತನ್ನ ಅಧಿಕಾರದ ವ್ಯಾಪ್ತಿಗೆ ಬರುವುದಿಲ್ಲ. ಈ ಬಗ್ಗೆ ಚುನಾವಣಾ ಆಯೋಗ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News