ಹೈಟೆಕ್ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಸಿದ್ಧತೆ

Update: 2019-05-17 16:40 GMT

ಬೆಂಗಳೂರು, ಮೇ 17: ಇನ್ನು ಮುಂದೆ ನಗರದ ಬಿಎಂಟಿಸಿ ಬಸ್ ನಿಲ್ದಾಣಗಳು ಸ್ಮಾರ್ಟ್ ಆಗಲಿವೆ. ಎಲ್ಲಾ ಮೂಲಸೌಲಭ್ಯಗಳನ್ನು ಕಲ್ಪಿಸಲು ಬಿಬಿಎಂಪಿ ಮಹತ್ವದ ಯೋಜನೆಯೊಂದನ್ನು ಸಿದ್ಧಪಡಿಸಿದೆ.

ಸೈನ್ ಪೋಸ್ಟ್ ಎಂಬ ಸಂಸ್ಥೆಯೊಂದಿಗೆ ಬಿಬಿಎಂಪಿ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಇದರನ್ವಯ ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ಎಲ್‌ಇಡಿ ಪರದೆಗಳು ಡಸ್ಟ್ ಬಿನ್‌ಗಳು ಇರಲಿವೆ. ಮೊದಲ ಹಂತದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ 12 ಬಸ್ ನಿಲ್ದಾಣಗಳಿಗೆ ಡಿಜಿಟಲ್ ರೂಪ ಕೊಡಲಾಗುವುದು. ಎಲ್‌ಇಡಿ ಪರದೆಗಳಲ್ಲಿ ಬಸ್ ಬರುವ ಸಮಯ, ಹೊರಡುವ ಸಮಯ ಹಾಗೂ ಪ್ರಯಾಣಿಕರಿಗೆ ಬೇಕಾದ ಮಾಹಿತಿಗಳು ಲಭ್ಯವಾಗಲಿವೆ.

ಈ ಹೈಟೆಕ್ ಬಸ್ ನಿಲ್ದಾಣಗಳಲ್ಲಿ ಸ್ಟೀಲ್ ಕಂಬಿಗಳನ್ನು ಅಳವಡಿಸಲಾಗುವುದು. ನಿಲ್ದಾಣದ ಸುತ್ತಲೂ ಸ್ಟೀಲ್ ಶೀಟುಗಳನ್ನು ಹೊದಿಸಲಾಗುವುದು. ಇದರಿಂದ ಬಸ್ ನಿಲ್ದಾಣ ಇನ್ನಷ್ಟು ಸ್ಮಾರ್ಟ್ ಆಗಲಿವೆ. ನಗರದಲ್ಲಿ ಈಗಿರುವ ಹಳೆಯ ಬಸ್ ನಿಲ್ದಾಣಗಳಿಗೆ ಹೊಸ ಸ್ಪರ್ಶ ಕೊಡಲಾಗುವುದು. ವಿಶೇಷ ಚೇತನರು ಈ ಬಸ್ ನಿಲ್ದಾಣಗಳಿಗೆ ಸುಲಭವಾಗಿ ಏರಲು ಅನುಕೂಲವಾಗುವಂತೆ ರ್ಯಾಂಪ್ ವ್ಯವಸ್ಥೆಯನ್ನು ಅಳವಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಬಸ್ ನಿಲ್ದಾಣ ವಿಧಾನಸೌಧದ ಮುಂಭಾಗ ಸದ್ಯದಲ್ಲೇ ತಲೆ ಎತ್ತಲಿದೆ. ಮತ್ತೆರೆಡು ಬಸ್ ನಿಲ್ದಾಣಗಳು ನಿರ್ಮಾಣವಾಗಲಿವೆ. ಇದರಿಂದ 'ವಿಧಾನಸೌಧದ ಮುಂಭಾಗ ಬಸ್ ನಿಲ್ದಾಣ ಇಲ್ಲ. ಬಿಸಿಲು, ಮಳೆ, ಗಾಳಿಗೆ ಮೈಯೊಡ್ಡಿ ನಿಲ್ಲಬೇಕಾಗಿತ್ತು' ಎಂಬ ಪ್ರಯಾಣಿಕರ ಆರೋಪಗಳು ಇನ್ನು ಮುಂದೆ ಕೇಳಿಬರುವುದಿಲ್ಲ. ಮೊದಲ ಹಂತದಲ್ಲಿ ಹೈಟೆಕ್ ಬಸ್ ನಿಲ್ದಾಣಗಳು ಯಶಸ್ವಿಗೊಂಡಲ್ಲಿ ನಗರದಲ್ಲಿ ಎಲ್ಲಾ ಬಿಎಂಟಿಸಿ ಬಸ್ ನಿಲ್ದಾಣಗಳು ಹೊಸ ರೂಪವನ್ನು ಪಡೆದುಕೊಳ್ಳಲಿವೆ.

ಎಲ್ಲೆಲ್ಲಿ ಹೈಟೆಕ್ ಬಸ್ ನಿಲ್ದಾಣಗಳು: ವಿಧಾನಸೌಧ, ವಿಠ್ಠಲ್ ಮಲ್ಯ ರಸ್ತೆ, ಚಾಲುಕ್ಯ ವೃತ್ತ, ರೆಸಿಡೆನ್ಸಿ ವೃತ್ತ, ಬೌರಿಂಗ್ ಕ್ಲಬ್ ನಿಲ್ದಾಣ, ಇಂದಿರಾನಗರ, ಕೋರಮಂಗಲ 1ನೇ ಬ್ಲಾಕ್, ಎಚ್‌ಎಸ್‌ಆರ್ ಲೇಔಟ್ ನಿಲ್ದಾಣ, ಕನ್ನಿಂಗ್ ಹ್ಯಾಮ್ ರಸ್ತೆ, ಮೌಂಟ್ ಕಾರ್ಮೆಲ್ ಕಾಲೇಜು ನಿಲ್ದಾಣ, ಕೆ.ಸಿ ಜನರಲ್ ಆಸ್ಪತ್ರೆ ನಿಲ್ದಾಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News