ಎಸ್ಸಿ-ಎಸ್ಟಿ ನೌಕರರ ಮುಂಭಡ್ತಿ ಮಂಜೂರಿಗೆ ಬಿಎಸ್ಪಿ ಆಗ್ರಹ
ಬೆಂಗಳೂರು, ಮೇ 17: ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ತಡೆ ಹಿಡಿರುವ ಎಸ್ಸಿ-ಎಸ್ಟಿ ನೌಕರರ ಮುಂಭಡ್ತಿಗಳನ್ನು ಮಂಜೂರು ಮಾಡುವಂತೆ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಒತ್ತಾಯ ಮಾಡಿದೆ.
ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಬಿ.ಕೆ.ಪವಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಆಧರಿಸಿ ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ತಡೆ ಹಿಡಿರುವ ಮುಂಭಡ್ತಿಗಳನ್ನು ಮಂಜೂರು ಮಾಡುವಂತೆ ಒತ್ತಾಯಿಸಿದರು.
ಬಿ.ಕೆ. ಪವಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಮುಂಭಡ್ತಿ ಪ್ರಕರಣ ವಿಚಾರಣೆ ಹಂತದಲ್ಲಿದ್ದರಿಂದ ರಾಜ್ಯ ಸರಕಾರ ವಿವಿಧ ಇಲಾಖೆಗಳ ಮುಂಭಡ್ತಿಯನ್ನು ತಡೆ ಹಿಡಿದಿತ್ತು. ಇದರಿಂದ ಹಲವು ವರ್ಷಗಳ ಕಾಲ ಸರಕಾರಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಸರಕಾರಿ ನೌಕರರಿಗೆ ಅನ್ಯಾಯವಾಗುತ್ತಿದೆ. ಈಗ ಸುಪ್ರೀಂ ಕೋರ್ಟ್ ಪವಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪು ನೀಡಿರುವುದರಿಂದ, ಸೇವಾ ನಿವೃತ್ತಿ ಹೊಂದಲಿರುವ ಅಧಿಕಾರಿಗಳಿಗೆ ಮುಂಭಡ್ತಿ ನೀಡಿ ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡಿದರು.
ಬಿಬಿಎಂಪಿ ಲೋಕೋಪಯೋಗಿ, ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ 36 ಸಾವಿರಕ್ಕೂ ಅಧಿಕ ನೌಕರರು ಇದ್ದು, ಅವರಿಗೆ ಈ ಕೂಡಲೇ ಮುಂಭಡ್ತಿ ನೀಡಬೇಕು ಎಂದ ಅವರು, ಶೀಘ್ರವಾಗಿ ಸರಕಾರ ಮುಂಭಡ್ತಿ ಮೀಸಲಾತಿ ನೀಡದಿದ್ದಲ್ಲಿ, ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.