ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಶೀಘ್ರ ತಲೆ ಎತ್ತಲಿದೆ ಅರಣ್ಯ ಘಟಕ

Update: 2019-05-17 16:49 GMT
ಕೆಂಪೇಗೌಡ ವಿಮಾನ ನಿಲ್ದಾಣ

ಬೆಂಗಳೂರು, ಮೇ 17: ವಿದೇಶಗಳಿಗೆ ರಕ್ತ ಚಂದನ, ಶ್ರೀಗಂಧ, ಪ್ರಾಣಿಗಳ ಚರ್ಮ ಸೇರಿ ಹಲವು ಅರಣ್ಯ ಉತ್ಪನಗಳನ್ನು ಅಕ್ರಮ ಸಾಗಣೆ ಮಾಡುವುದನ್ನು ತಡೆಗಟ್ಟುವುದಕ್ಕಾಗಿ ಕೇಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೀಘ್ರದಲ್ಲಿಯೆ ಅರಣ್ಯ ಘಟಕವೊಂದು ತಲೆ ಎತ್ತಲಿದೆ.

ಇತ್ತೀಚೆಗೆ ರಕ್ತ ಚಂದನ, ಶ್ರೀಗಂಧ ಉತ್ಪನ್ನಗಳನ್ನು ವಿದೇಶಕ್ಕೆ ಕಳ್ಳಸಾಗಣೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ, ಇದಕ್ಕೆ ಕಡಿವಾಣ ಹಾಕಲು ಅರಣ್ಯ ಇಲಾಖೆ ನಿರ್ಧರಿಸಿದೆ. ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಅರಣ್ಯ ಘಟಕವೊಂದನ್ನು ಸ್ಥಾಪಿಸಿ ಸಿಬ್ಬಂದಿಗಳನ್ನು ನೇಮಿಸಲಾಗುತ್ತದೆ. ವಿಮಾನಗಳ ಮೂಲಕ ಆನೆ ದಂತ, ಅದರ ಉತ್ಪನ್ನಗಳು, ಪ್ರಾಣಿಗಳ ಚರ್ಮ, ಉಗುರು ಸೇರಿ ಹಲವು ಅರಣ್ಯ ಉತ್ಪನ್ನಗಳ ಅಕ್ರಮ ಸಾಗಾಣಿಕೆ ನಡೆಯುತ್ತಿದೆ. ಈ ಕುರಿತು ಅರಣ್ಯ ಇಲಾಖೆಗೆ ಹಲವು ದೂರುಗಳು ಬಂದಿವೆ. ಕೆಲವು ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಪರಿಶೀಲನೆಯ ನಂತರವೂ ಈ ಅಕ್ರಮಗಳು ನಡೆಯುತ್ತಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಅಲ್ಲದೆ, ಅರಣ್ಯದ ಉತ್ಪನ್ನಗಳನ್ನು ವಿದೇಶಕ್ಕೆ ಕಳ್ಳಸಾಗಣೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅರಣ್ಯ ಘಟಕಕ್ಕೆ ಇಲಾಖೆಯಿಂದ ಉಪವಲಯ ಅರಣ್ಯ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗುವುದು, ಈ ಅಧಿಕಾರಿಗಳಿಗೆ ಅರಣ್ಯ ಉತ್ಪನ್ನ ಹಾಗೂ ವನ್ಯ ಜೀವಿಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇರುತ್ತದೆ, ಅಲ್ಲದೆ ಇಲಾಖೆಯಿಂದ ತರಬೇತಿ ಪಡೆದ ಅಧಿಕಾರಿಗಳು ಇರುತ್ತಾರೆ ಎಂದು ಅರಣ್ಯ ಸಂರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News