ನಾವು ಈಗಲೂ ಬ್ರಿಟಿಷ್ ಪ್ರಜೆಗಳು: ಚಂದ್ರಶೇಖರ ಕಂಬಾರ

Update: 2019-05-17 17:28 GMT

ಬೆಂಗಳೂರು, ಮೇ 17: ಇಂಗ್ಲಿಷ್ ವ್ಯಾಮೋಹದಲ್ಲಿ ಮುಳಗಿರುವ ನಾವು ಈಗಲೂ ಮಾನಸಿಕವಾಗಿ ಬ್ರಿಟಿಷ್ ಪ್ರಜೆಗಳಾಗಿದ್ದೇವೆ ಎಂದು ಕೇಂದ್ರ ಸಾಹಿತ್ಯ ಅಕಾಡಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಇಂದಿಲ್ಲಿ ಹೇಳಿದ್ದಾರೆ. 

ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಸಾಹಿತ್ಯ ಅಕಾಡಮಿ ಮತ್ತು ಪಂಪ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರ ಆಯೋಜಿಸಿದ್ದ, ಬಿ.ಪುಟ್ಟಸ್ವಾಮಯ್ಯ ಅವರ ಬದುಕು- ಬರಹ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಮೊದಲ ಬಾರಿಗೆ ಭಕ್ತಿ ಕ್ರಾಂತಿ ನಡೆದಿತ್ತು. ತದನಂತರ ನಡೆದ ಲಾರ್ಡ್ ಮೆಕಾಲೆ ಅವರ ಇಂಗ್ಲಿಷ್ ಕ್ರಾಂತಿಯಿಂದ ಎಲ್ಲರಿಗೂ ಸಮಾನ ಶಿಕ್ಷಣ ದೊರೆಯಿತು. ಆದರೆ ನಾವು ಬದಲಾಗದೆ ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗಿ ಈಗಲೂ ಮಾನಸಿಕವಾಗಿ ಬ್ರಿಟಿಷರಂತೆ ಆಗಿಬಿಟ್ಟಿದ್ದೇವೆ ಎಂದು ನುಡಿದರು.

ನಾಟಕಕಾರ ಬಿ.ಪುಟ್ಟಸ್ವಾಮಯ್ಯ ಅವರಿಗೆ ಒಂದು ಕಡೆಯಲ್ಲಿ ಸೂಕ್ತ ಪ್ರಸಿದ್ಧಿ ದೊರೆಯಲಿಲ್ಲ ಎನ್ನುವ ಅಭಿಪ್ರಾಯ ಬರುತ್ತದೆ. ಆದರೆ ಅವರಿಗೆ ರಂಗಭೂಮಿ ಕುರಿತು ಅಪಾರ ಆಸಕ್ತಿ ಇತ್ತು. ಅಲ್ಲದೆ ಸ್ವಾತಂತ್ರ್ಯಕ್ಕೂ ಮೊದಲು ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ನಾಟಕ ಎನ್ನುವುದು ಪ್ರಮುಖ ಸಂವಹನ ಪಾತ್ರ ವಹಿಸಿತ್ತು. ಈ ನಾಟಕಗಳಲ್ಲಿ ಬರುವ ರಾವಣ ಪಾತ್ರದ ದಾಟಿಯನ್ನು ಬ್ರಿಟಿಷರು ಎಂದು ಪುಟ್ಟಸ್ವಾಮಯ್ಯ ಬಿಂಬಿಸುತ್ತಿದ್ದುದನ್ನು ನಾವು ಮರೆಯುವಂತಿಲ್ಲ ಎಂದರು. ವಿಚಾರ ಸಂಕಿರಣದಲ್ಲಿ ಸಾಹಿತ್ಯ ಅಕಾಡಮಿಯ ಕನ್ನಡ ಸಲಹಾ ಸಮಿತಿ ಸದಸ್ಯ ಎಲ್.ಎನ್.ಮುಕುಂದರಾಜ್, ಪಂಪ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರ ಕಾರ್ಯದರ್ಶಿ ಆರ್.ವೆಂಕಟರಾಜು ಸೇರಿದಂತೆ ಮತ್ತಿತರಿದ್ದರು.

ಪುಟ್ಟಸ್ವಾಮಯ್ಯ ವಿಚಾರ ಸಂಕಿರಣ
ಕನ್ನಡ ನಾಡಿನ ಬಹುಮುಖ ಪ್ರತಿಭೆ, ನಾಟಕಕಾರ ಬಿ.ಪುಟ್ಟಸ್ವಾಮಯ್ಯ ಅವರ ಕುರಿತು ರಾಷ್ಟ್ರಮಟ್ಟದಲ್ಲಿ ಚರ್ಚೆ ನಡೆಯಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಸಹಯೋಗದೊಂದಿಗೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಲಾಗುವುದೆಂದು ಚಂದ್ರಶೇಖರ ಕಂಬಾರ ಪ್ರಕಟಿಸಿದರು.

ರಂಗಭೂಮಿಗೆ ಅಪಾರ ಕೊಡುಗೆ ನೀಡಿರುವ ಪುಟ್ಟಸ್ವಾಮಯ್ಯ ಅವರ ಬಗ್ಗೆ ಯುವ ಜನತೆ ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಶಾಲಾ- ಕಾಲೇಜುಗಳಲ್ಲಿ ಪುಟ್ಟಸ್ವಾಮಯ್ಯ ಕುರಿತು ಕಾರ್ಯಕ್ರಮ ಆಯೋಜಿಸಲಾಗುವುದು. ಸಿನಿಮಾ ನಿರ್ದೇಶಕ ಟಿ.ಎಸ್.ನಾಗಾಭರಣ, ಪುಟ್ಟಸ್ವಾಮಯ್ಯ ಅವರ ನಾಟಕಗಳು ಪಾತ್ರವಲ್ಲದೆ ಅವರು ಬರೆದಿರುವ ಕಾದಂಬರಿಗಳು ಸಹ ಸಾಹಿತ್ಯ ಲೋಕದಲ್ಲಿ ಸದ್ದು ಮಾಡಿವೆ. ಹೀಗಾಗಿ ರಂಗಕರ್ಮಿಗಳು, ಆಸಕ್ತರು, ಒಮ್ಮೆಯಾದರೂ ಪುಟ್ಟಸ್ವಾಮಯ್ಯ ಅವರ ಬರಹಗಳನ್ನು ಓದುವಂತೆ ಆಗಬೇಕು. 

-ಕೆ.ಎಂ.ಜಾನಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News