ಪರಂಪರೆಯ ರೋಗಕ್ಕೆ ಬುದ್ಧನೇ ದಿವ್ಯೌಷಧ

Update: 2019-05-17 18:31 GMT

ಶಾಂತಿ, ಕರುಣೆ, ಪ್ರೀತಿ ಮೈತ್ರಿಯ ತದ್ರೂಪವೇ ಬುದ್ಧ. ಇಂದು ಆತನ ಜನ್ಮ ದಿನ. ಜಗತ್ತು ಮಹಾಸ್ಫೋಟವನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡು ಬುದ್ಧನನ್ನು ಇಂದು ಸ್ಮರಿಸುತ್ತಿದೆ. ಬುದ್ಧ ಜಗತ್ತಿಗೆ ಚಿಕಿತ್ಸೆ ಹೇಗೆ? ಎಂಬುದನ್ನು ವಿದೇಶಿ ಜೆ. ಎಸ್. ವೇಲ್ಸ್‌ನ ಮಾತುಗಳಲ್ಲಿಯೂ, ಬುದ್ಧ ಜಗತ್ತಿಗೆ ಮಾನವ ಘನತೆ ಹೇಗೆ? ಎಂಬುದನ್ನು ದೇಶಿಯ ರವೀಂದ್ರನಾಥ ಟಾಗೋರ್‌ರ ಮಾತಿನಲ್ಲ್ಲಿಯೂ ನೆನೆಯಬೇಕು.

‘‘ಬದುಕಿನ ಎಲ್ಲ ದುಃಖ ಮತ್ತು ನಿರಾಸೆಗಳಿಗೆ ಸ್ವಾರ್ಥವೇ ಕಾರಣ ಎಂದು ಬುದ್ಧ ಬೋಧಿಸಿದ.
ಸ್ವಾರ್ಥದ ರೂಪಗಳು ಮೂರು: ಶಾರೀರಿಕ ಸುಖವನ್ನು ತೃಪ್ತಿ ಪಡಿಸಿಕೊಳ್ಳುವ ಹಂಬಲ. ಎರಡನೆಯದು, ನಾನೊಬ್ಬನೇ ಅಮರನಾಗಬೇಕೆಂಬ ತುಡಿತ. ಮೂರನೆಯದು, ನಾನೊಬ್ಬ ಮಾತ್ರ ಮುಂದುವರಿಯಬೇಕು ಎಂಬ ಹಂಬಲ ಮತ್ತು ಜೀವನದಲ್ಲಿ ತಾನೊಬ್ಬನೇ ಆನಂದ ಹೊಂದಬೇಕೆಂಬ ಬಯಕೆ. ಇದನ್ನು ಮಾನವ ತ್ಯಜಿಸಬೇಕು ಆಗ ಮಾತ್ರ ಅವನು ನಿಜವಾದ ಚೇತನದೊಂದಿಗೆ ಬದುಕುತ್ತಾನೆ ಎಂಬುದನ್ನು ಬುದ್ಧನು ಭಿನ್ನವಾದ ಭಾಷೆಯಲ್ಲಿ ಏಸು ಕ್ರಿಸ್ತನಿಗಿಂತ ಐದು ನೂರು ವರ್ಷಗಳ ಹಿಂದೆಯೇ ಸ್ವಾರ್ಥ ತೊರೆಯುವಂತೆ ಜನರಿಗೆ ಕರೆ ನೀಡಿದ್ದ’’. ಎಂಬ ವೇಲ್ಸನ ಈ ಮಾತಿನಲ್ಲಿ ಬುದ್ಧನ ಜವಾಬ್ದಾರಿಯ ಜಾಡನ್ನು ಹಿಡಿಯಬೇಕು.
 ‘‘ಬುದ್ಧನ ಜೀವನ ಚರಿತ್ರೆ ಒಂದು ಕವಿತೆಯಾಗಿದೆ. ಅದು ನಾವೆಂದೂ ಓದಿರದ ಮನೋಹರ ಆಕರ್ಷಕ ಕಲಾತ್ಮಕವಾದ ಅದ್ಭುತ ಮಹಾಕಾವ್ಯವೇ ಆಗಿದೆ. ಬುದ್ಧನ ಬರುವಿಕೆಯಿಂದ ಮನುಷ್ಯ ಕುಲ ತನ್ನ ಇತಿಹಾಸದಲ್ಲಿ ಒಂದು ಅತ್ಯುನ್ನತವಾದ ಗೌರವ ಸ್ಥಾನವನ್ನು ಪಡೆದುಕೊಂಡಿತ್ತು’’.
ಎಂಬ ಟಾಗೋರ್‌ರ ಮಾತಿನಲ್ಲಿ ಬುದ್ಧನ ಪರಂಪರೆಯ ಜಾಡನ್ನು ಹಿಡಿಯಬೇಕು.
ಬುದ್ಧ ಮಾತಿನ ಮಿತಿ ಬಲ್ಲವನು. ನಿಜವಾದ ದುಃಖದ ಅರಿವೇ ಧರ್ಮ ಎಂದ. ಅದನ್ನು ಒಂದು ದೃಷ್ಟಾಂತದ ಮೂಲಕ ಚರ್ಚಿಸಿದ. ಒಬ್ಬನಿಗೆ ಎಲ್ಲಿಂದಲೋ ಬಾಣ ಬಂದು ತಗಲುತ್ತದೆ, ಹಾಗೆ ಬಂದ ಬಾಣದ ಮೂಲೆಯಲ್ಲಿ? ಎಸೆದವರು ಯಾರು? ಹೀಗೆ ಚಿಂತಿಸುವುದು ಹಾನಿಕಾರಕ. ಈಗ ತಕ್ಷಣದ ಅಗತ್ಯ ಎಂದರೆ ಬಾಣಕ್ಕೆ ಗುರಿಯಾದವರನ್ನು ಕಾಪಾಡಬೇಕು, ಬಾಣದ ಮೂಲದ ಚಿಂತನೆ ಸಲ್ಲದು ಎಂದ.
ಬುದ್ಧನ ದೃಷ್ಟಿಯಲ್ಲಿ ಧರ್ಮ ಎಂದರೆ ಉಪದೇಶವಲ್ಲ ಉಪಚಾರ. ಒಮ್ಮೆ ಈತನ ಆಶ್ರಮದಲ್ಲಿ ಮುದಿ ರೋಗಿಯೊಬ್ಬನನ್ನು ಯಾರೂ ಸರಿಯಾಗಿ ನೋಡಿಕೊಳ್ಳಲಿಲ್ಲ. ತನ್ನ ಕೆಲಸಗಳ ನಡುವೆ ಆ ಕಡೆ ಗಮನ ಹರಿಸದ್ದಕ್ಕೆ ಗುರುವಿಗೆ ತನ್ನ ಬಗ್ಗೆ ಬೇಸರವಾಯಿತು. ಆ ಮುದಿ ರೋಗಿಯನ್ನು ತಾನೇ ಉಪಚರಿಸಿ ನೋಡಿಕೊಂಡ. ಅದು ತನ್ನೆಲ್ಲ ಉಪದೇಶಕ್ಕಿಂತ ಮುಖ್ಯವಾದುದು ಅಂತ ಆತ ತಿಳಿದಿದ್ದ.

 
ಮಾನವ ಪ್ರೇಮ, ಕರುಣೆ, ಮೈತ್ರಿ ಸಮತೆಯನ್ನು ಧಿಕ್ಕರಿಸಿದ ಪರಂಪರೆಯ ಮನೋರೋಗಕ್ಕೆ ಔಷಧವಾಗಿ ಬುದ್ಧ ಎದ್ದು ಬಂದ ಬುದ್ಧ ಬೋಧಿಸಿದ್ದು ಜೀವನ ಮಾರ್ಗವನ್ನು. ಸರಳ ಜೀವನ ಮಾರ್ಗವನ್ನು. ನೀವು ಮಧ್ಯದಲ್ಲಿರಿ ಎಂದು ಮಧ್ಯಮಮಾರ್ಗ ಬೋಧಿಸಿದ. ಜಗತ್ತಿನ ಎಲ್ಲಾ ಧರ್ಮಗಳು, ನನ್ನನ್ನು ನಂಬಿ. ನನ್ನನ್ನು ಹಿಂಬಾಲಿಸಿ. ನಿಮಗೆ ಮುಕ್ತಿಯನ್ನು ನೀಡುತ್ತೇವೆೆ. ಶಾಂತಿಯನ್ನು ನೀಡುತ್ತೇವೆ ಎಂದವು. ಆದರೆ ಬುದ್ಧ ಜಗತ್ತಿನಲ್ಲಿ ಮೊತ್ತ ಮೊದಲ ಬಾರಿಗೆ ನನ್ನನ್ನು ಸಂದೇಹ ಪಡಿ ಎಂದ. ಎಷ್ಟು ಸಂದೇಹಿಸಿಲು ಸಾಧ್ಯವೋ ಅಷ್ಟು ಸಂದೇಹ ಪಡಿ. ಸಂದೇಹದಿಂದ ಮಾತ್ರ ಮೂಲ ಸತ್ಯದರ್ಶನವಾಗುತ್ತದೆ ಎಂದ. ಪ್ರಶ್ನಿಸದೇ ಒಪ್ಪಿಕೊಂಡರೆ ಅದು ನಿನ್ನ ಮಹಾಪರಾಧ ಎಂದು, ಪ್ರಶ್ನೆ ಕೇಳುವುದೇ ಮಹಾಪರಾಧ ಎಂಬ ಪರಂಪರೆಯನ್ನು ಇಲ್ಲಿ ಬುದ್ಧ ಧಿಕ್ಕರಿಸಿದ. ದೇವರು, ನರಕ, ಸ್ವರ್ಗ, ಆತ್ಮದ ಬಗ್ಗೆ ಮೌನ ವಹಿಸಿದ. ಇದು ಮಹಾಮೌನ ಎಂದೇ ಪ್ರಸಿದ್ಧಿ. ಅಂತರ್ಗತ ಅಗೋಚರ ವಿಚಾರಗಳ ಬಗ್ಗೆ ಆತ ಎಂದೂ ಮಾತನಾಡಲಿಲ್ಲ. ಆದರೆ ಇಂತಹ ಅಗೋಚರ ವಿಚಾರಗಳ ಬಗ್ಗೆ ಮಾತನಾಡಿ ಜನರನ್ನು ಅಜ್ಞಾನದಲ್ಲಿ ಇಡುತ್ತಿದ್ದ ಪಂಡಿತ ಪಾಮರ ಪರಂಪರೆಯನ್ನು ಧಿಕ್ಕರಿಸಿದ.

 ನಾನು ಇತ್ತೀಚೆಗೆ, ‘‘ಬುದ್ಧ ಬೋಧಿಯಾಗುವುದಕ್ಕಿಂತ ಕತ್ತಿಯನ್ನೇ ಹಿಡಿದಿದ್ದರೆ, ಇನ್ನು ಹೆಚ್ಚಿನದೇನನ್ನೊ ಮಾಡಬಹುದಾಗಿತ್ತು. ಅಶೋಕ ಒಬ್ಬ ಚಕ್ರವರ್ತಿಯಾಗಿ ದಮ್ಮದ ಪರಿಪಾಲನೆಯಲ್ಲಿ ಅಷ್ಟೊಂದು ತೊಡಗಬಾರದಿತ್ತು ಮತ್ತು ನಮ್ಮ ಆಡಳಿತದಲ್ಲಿ, ಕಾನೂನಿನಲ್ಲಿ ಪರಂಪರೆ ಇರಬೇಕಾಗಿತ್ತು’’ ಎಂಬ ಭಾಷಣಗಳನ್ನು ಕೇಳಿದೆ. ಇಂತಹವರಿಗೆ ಬೆಳಕಿನ ಕೊರತೆ ಇದೆ ಎನಿಸಿತು. ಬುದ್ಧ ಒಂದು ಮೂಲ ಬೆಳಕು, ಮೂಲ ಬೆಳಕನ್ನು ನೇರವಾಗಿ ನೋಡಿದಾಗ ಕಣ್ಣು ಮಂಜಾಗಿ ಹೋಗುತ್ತವೆ. ಅಂತಹ ಪ್ರಖರತೆಯನ್ನು ಒಮ್ಮೆಗೆ ಮಾನವನ ನಯನಗಳು ಸಹಿಸಲಾರವು. ಮೂಲ ಬೆಳಕು ಇನ್ನೊಂದು ಪುಟ್ಟ ದೀಪವನ್ನು ಹೇಗೆ ಬೆಳಕಾಗಿಸಿದೆ ಎಂದು ನೋಡಬೇಕು. ನಿಧಾನವಾಗಿ ನಾವು ಬೆಳಕಿನತ್ತ ಅರಿಯಬೇಕು. ಅದನ್ನು ಒಳಗೊಳ್ಳಬೇಕು. ಇದನ್ನು ಒಳಗೊಳ್ಳುವಿಕೆಗೆ ಮನಸ್ಸಿಲ್ಲದವರು ಮತ್ತು ಕೊಳಕನ್ನೇ ಪರಂಪರೆ ಎಂದುಕೊಂಡವರ ಸಮಸ್ಯೆ ಇದು. ಇಲ್ಲಿ ಸಮಸ್ಯೆ ಇರುವುದು ಬೆಳಕಿನಲ್ಲಲ್ಲ ಒಳಗೊಳ್ಳುವಿಕೆಯಲ್ಲಿ. ಪರಂಪರೆಯಲ್ಲಿ.

ಬುದ್ಧ ಪಂಡಿತನಾಗಿರಲಿಲ್ಲ ಜ್ಞಾನಿಯಾಗಿದ್ದ. ಪಂಡಿತ ತನ್ನ ಪಾಂಡಿತ್ಯದಿಂದ ಮತ್ತೊಬ್ಬನನ್ನು ಮುಖಭಂಗಗೊಳಿಸುವುದರಲ್ಲಿ ನಿಷ್ಣಾತನಾಗಿರುತ್ತಾನೆ. ಆದರೆ ಜ್ಞಾನಿ ಮಾತ್ರ ಮತ್ತೊಬ್ಬನನ್ನು ಜ್ಞಾನಿಯಾಗಿಸಬಲ್ಲ. ದೀಪದಿಂದ ಮತ್ತೊಂದು ದೀಪ ಹಚ್ಚಿದ ಹಾಗೆ. ಬುದ್ಧ ಬರೀ ಮಾತನಾಡಿದ್ದರೆ ಆತನ ಬಗ್ಗೆ ಇನ್ನೂ ಏನನ್ನಾದರೂ ಹೇಳಬಹುದಿತ್ತೇನೋ. ಆದರೆ ಆತ ಮಹಾ ಮೌನಿಯೂ ಕೂಡ. ‘‘ಮೌನವನ್ನು ಹೇಗೆ ವಿವರಿಸುವುದು? ನನಗೆ ತಿಳಿಯದು. ಅದನ್ನು ಅನುಭವಕ್ಕೆ ತಂದುಕೊಳ್ಳಬೇಕು. ಜಗತ್ತಿನ ಹಿತ-ಮಿತಿ ಸತ್ಯಾ-ಸತ್ಯತೆಯನ್ನು ನಿನ್ನ ಅನುಭವಕ್ಕೆ ತಂದುಕೊಂಡರೆ ನೀನು ಕೂಡ ಒಬ್ಬ ಬೋಧಿ. ಜಗತ್ತು ಇದನ್ನು ಅನುಸರಿಸಿದರೆ ಜಗವೇ ಬೋಧಿ.’’
ಲಂಕೇಶರ ಮಾತಿನಲ್ಲಿಯೇ ಹೇಳುವುದಾದರೆ ‘‘ಈ ಮನುಷ್ಯ ಅರಮನೆ, ದೇವಾಲಯಗಳನ್ನು ಬಿಟ್ಟು ಆತ ನಿರ್ವಾಣದ ಕಡೆ ಹೊರಟ. ಆದರೆ ಈತ ದೇವರನ್ನು ತಲುಪಲಿಲ್ಲ. ಬದಲಾಗಿ ಮನುಷ್ಯರನ್ನು ತಲುಪಿದ. ಅದು ಪ್ರೀತಿಯ ಮೂಲಕ. ಜಗತ್ತಿಗೆ ಪ್ರೇಮವನ್ನು, ತಾಯ್ತನವನ್ನು, ಸರಳ ನೆಮ್ಮದಿಯನ್ನು ಕೊಟ್ಟ. ಇದು ಯಾವ ಅಧಿಕಾರದ ಗದ್ದುಗೆಯೂ, ಸೈನ್ಯದ ಆರ್ಭಟವೂ, ಮನುಕುಲಕ್ಕೆ ನೀಡಲಾರದ ಕಾಣಿಕೆ.’’

ಕೇವಲ ಭಾರತ ಮಾತ್ರವಲ್ಲ, ಇಂದು ವಿಶ್ವವೇ ಬುದ್ಧನ ಅನಿವಾರ್ಯತೆಯ ಸನಿಹಕ್ಕೆ ಬಂದು ನಿಂತಿದೆ. ಜಗತ್ತಿನ ಎರಡು ಮಹಾ ಯುದ್ಧಗಳ ನಂತರವೂ ಭಯೋತ್ಪಾದನೆಯಂತಹ ಅಮಾನುಷ ಸಾವು ನೋವುಗಳ ನಂತರವೂ, ಪುಲ್ವಾಮ, ಶ್ರೀಲಂಕಾ, ನ್ಯೂಝಿಲ್ಯಾಂಡ್‌ನಂತಹ ಆತ್ಮಾಹುತಿ ಬಾಂಬುಗಳ ಸ್ಫೋಟದ ನಡುವೆಯೂ ಜಗತ್ತು ಎಷ್ಟೇ ತನ್ನ ಪ್ರಶಾಂತತೆಯನ್ನು ಕಳೆದುಕೊಂಡರೂ, ಬುದ್ಧ ಮಾತ್ರ ತನ್ನ ಪ್ರಶಾಂತತೆಯನ್ನು ಕಳೆದುಕೊಂಡಿಲ್ಲ ಕಾರಣ ಈ ಪರಿ ಜಗದ ದುಃಖಕ್ಕೆ ಜಗವೇ ಕಾರಣವೇ ಹೊರತು ಮತ್ತೇನೂ ಅಲ್ಲ. ಪರಂಪರೆಯ ಕೊಳಕಿಗೆ ವೈರಿ ಎಂದು ನನಗೆ ಬುದ್ಧ ಧರ್ಮ ಪ್ರಿಯ. ಆದರೆ ದಮ್ಮ ದಾಸರಿಗೆ ಅದು ಆಧುನಿಕ ಜಗತ್ತಿನ ವಿಷಕ್ಕೆ ಮದ್ದು. ಪಶ್ಚಿಮದಲ್ಲಿ ಬೌದ್ಧ ಧರ್ಮ ಈ ಶತಮಾನದಲ್ಲಿ ಮತ್ತೆ ಆಕರ್ಷಕವಾದದ್ದು ಆಧುನಿಕ ನಾಗರಿಕತೆಯ ವಿಕಾರಕ್ಕೆ ಪರಿಹಾರವಾಗಿ. ಆದರೆ ನಮ್ಮಲ್ಲಿ ಅಂಬೇಡ್ಕರರಿಗೆ ಅದು ಮೊದಲಿಗೆ ಪ್ರಿಯವಾದದ್ದು ಕ್ರೂರ ಅಸಮಾನತೆಯ ಪರಿಹಾರಕ್ಕಾಗಿ. ಈ ಎಳೆಯನ್ನು ಹಿಡಿದು ಯೋಚಿಸದರೆ ಜಗವೂ ಸೌಖ್ಯ..ಈ ನೆಲವೂ ಸೌಖ್ಯ...ಈ ನೆಲದೊಳಗಿನ ಶೋಷಿತರೂ ಸೌಖ್ಯ....

Writer - ಮಲ್ಕಂಡಿ ಮಹದೇವಸ್ವಾಮಿ

contributor

Editor - ಮಲ್ಕಂಡಿ ಮಹದೇವಸ್ವಾಮಿ

contributor

Similar News