ಮೊದಲ ಚಾಲಕರಹಿತ ಟ್ರಕ್ ರಸ್ತೆಗಿಳಿದಿದೆ, ನೋಡಿ....

Update: 2019-05-17 18:39 GMT

 ಚಾಲಕ ರಹಿತ ಮೊದಲ ಇಲೆಕ್ಟ್ರಿಕ್ ಟ್ರಕ್ ಸ್ವೀಡನ್‌ನಲ್ಲಿ ರಸ್ತೆಗಿಳಿದಿದೆ. ಸ್ಟಾರ್ಟ್‌ಅಪ್ ಕಂಪನಿ ಈನ್ರೈಡ್ ಜೋಂಕೊಪಿಂಗ್‌ನ ಕೈಗಾರಿಕಾ ಪ್ರದೇಶವೊಂದರಲ್ಲಿ ಇತರ ವಾಹನಗಳೊಂದಿಗೆ ಸಂಚಾರಕ್ಕೆ ಬಿಡುವ ಮೂಲಕ ಈ ಟ್ರಕ್‌ನ್ನು ಪರೀಕ್ಷೆಗೊಳಪಡಿಸಿದೆ.

ಟಿ-ಪಾಡ್ ಎಂದು ಹೆಸರಿಸಲಾಗಿರುವ ಈ ಚಾಲಕನ ಕ್ಯಾಬಿನ್ ರಹಿತ ಟ್ರಕ್ ಸಾರ್ವಜನಿಕ ರಸ್ತೆಯಲ್ಲಿ ಬುಧವಾರ ಮೊದಲ ಬಾರಿಗೆ ಸಂಚಾರವನ್ನಾರಂಭಿಸಿದೆ. ಅಧಿಕಾರಿಗಳು ಈ ಟ್ರಕ್‌ಗೆ ಸದ್ಯಕ್ಕೆ ಡಿ.31,2020ರವರೆಗೆ ಸಂಚಾರ ಅನುಮತಿಯನ್ನು ನೀಡಿದ್ದಾರೆ. ಕೈಗಾರಿಕಾ ಪ್ರದೇಶದಲ್ಲಿ ವಾಹನಗಳ ವೇಗ ಕಡಿಮೆಯಿರುವ ಸಾರ್ವಜನಿಕ ರಸ್ತೆಯಲ್ಲಿ ಅಲ್ಪದೂರಕ್ಕೆ ಸಂಚರಿಸಲು ಈ ಟ್ರಕ್‌ಗೆ ಅನುಮತಿ ಲಭಿಸಿದೆ.

ಈ ಟ್ರಕ್‌ನ್ನು ನಿವಾಹಕನೋರ್ವ ದೂರದಿಂದಲೇ ರಿಮೋಟ್ ಕಂಟ್ರೋಲ್ ಮೂಲಕ ನಿರ್ವಹಿಸುತ್ತಾನೆ ಮತ್ತು ಅಗತ್ಯವಾದರೆ ಆತ ಟ್ರಕ್‌ನ್ನು ಸಂಪೂರ್ಣವಾಗಿ ತನ್ನ ನಿಯಂತ್ರಣದಲ್ಲಿ ಪಡೆದುಕೊಳ್ಳಬಹುದಾಗಿದೆ.

    ಟ್ರಕ್ ಕ್ಯಾಮೆರಾಗಳು,ರೇಡಾರ್‌ಗಳು ಮತ್ತು 3ಡಿ ಸೆನ್ಸರ್‌ಗಳಿಂದ ಸಜ್ಜಿತವಾಗಿದ್ದು,ಇವು ಸುತ್ತಲಿನ 360 ಡಿಗ್ರಿ ವ್ಯಾಪ್ತಿಯಲ್ಲಿನ ಆಗುಹೋಗುಗಳ ಕುರಿತು ಅರಿವು ನೀಡುತ್ತಿರುತ್ತವೆ. ವಾಹನವು ಸ್ವಾಯತ್ತ ಚಾಲನಾ ವೇದಿಕೆಯನ್ನು ಬಳಸುತ್ತಿದ್ದು,ಅದರಲ್ಲಿನ ವ್ಯವಸ್ಥೆಗಳು 5ಜಿ ನೆಟ್‌ವರ್ಕ್ ಮೂಲಕ ಪರಸ್ಪರ ಸಂಪರ್ಕವನ್ನು ಹೊಂದಿವೆ. ಈ ಟ್ರಕ್ ಪ್ರತಿ ಗಂಟೆಗೆ 85 ಕಿ.ಮೀ.ವೇಗದಲ್ಲಿ ಚಲಿಸಬಲ್ಲದು,ಆದರೆ ಪರೀಕ್ಷಾರ್ಥ ಪ್ರಯೋಗದ ಸಂದರ್ಭದಲ್ಲಿ ಪ್ರತಿ ಗಂಟೆಗೆೆ ಐದು ಕಿ.ಮೀ.ವೇಗದಲ್ಲಿ ಮಾತ್ರ ಸಂಚರಿಸಲು ಅನುಮತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News