ಸ್ಟೀವ್ ವಾ ಕೈ ಗೆ ವಿಶ್ವಕಪ್

Update: 2019-05-18 02:53 GMT

1999   ರ ವಿಶ್ವಕಪ್‌ನ ಆತಿಥ್ಯ ಮತ್ತೆ ‘ಕ್ರಿಕೆಟ್ ಕಾಶಿ’ ಇಂಗ್ಲೆಂಡ್‌ಗೆ ದೊರೆಯಿತು.ಏಳನೇ ಆವೃತ್ತಿಯ ಈ ಟೂರ್ನಮೆಂಟ್‌ನಲ್ಲಿ ಆಸ್ಟ್ರೇಲಿಯ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿ ವಿಶ್ವಚಾಂಪಿಯನ್ ಪಟ್ಟಕ್ಕೇರಿತು. ಹಿಂದಿನ ವಿಶ್ವಕಪ್ ಟೂರ್ನಮೆಂಟ್ ಹಲವು ವಿವಾದದ ಸುತ್ತ ಗಿರಕಿ ಹೊಡೆದಿದ್ದರೂ, ಈ ವಿಶ್ವಕಪ್ ಭಿನ್ನವಾಗಿತ್ತು. ವಿಶ್ವಕಪ್‌ನ ಕೊನೆಯ ವೇಳೆಗೆ ಕೆಲವು ಪಂದ್ಯಗಳಿಗೆ ಮ್ಯಾಚ್ ಫಿಕ್ಸಿಂಗ್ ವಾಸನೆ ಬಡಿದಿತ್ತು. ಆದರೆ ಅದು ಸಾಬೀತಾಗಲಿಲ್ಲ. ಕ್ರಿಕೆಟ್ ಜನಕ ದೇಶದಲ್ಲಿ ವಿಶ್ವಕಪ್ ಮತ್ತೊಮ್ಮೆ ಯಶಸ್ವಿಯಾಗಿತ್ತು. ಆಸ್ಟ್ರೇಲಿಯ ಹಿಂದಿನ ವಿಶ್ವಕಪ್‌ನಲ್ಲಿ ಕಳೆದುಕೊಂಡಿರುವುದನ್ನು ಈ ವಿಶ್ವಕಪ್‌ನಲ್ಲಿ ಪಡೆಯಿತು.

ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕ ತಂಡಗಳು ಕಪ್ ಗೆಲ್ಲುವ ಪ್ರಯತ್ನದಲ್ಲಿ ಎಡವಿದವು.1992ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕ ತಂಡಕ್ಕೆ ಮಳೆಯಿಂದಾಗಿ ಅದೃಷ್ಟ ಕೈಕೊಟ್ಟಿತ್ತು. ಈ ವಿಶ್ವಕಪ್‌ನಲ್ಲೂ ಹಣೆಬರಹ ಬದಲಾಗಲಿಲ್ಲ.

 ಈ ವಿಶ್ವಕಪ್‌ನಲ್ಲಿ ಒಟ್ಟು 12 ತಂಡಗಳು 42 ಪಂದ್ಯಗಳನ್ನಾಡಿದ್ದವು. ಸೂಪರ್ ಸಿಕ್ಸ್ ಈ ಟೂರ್ನಮೆಂಟ್‌ನಲ್ಲಿ ಪರಿಚಯಿಸಲಾಯಿತು.

      ಟೂರ್ನಿಯಲ್ಲಿ ಭಾಗವಹಿಸಿದ್ದ ಆಸ್ಟ್ರೇಲಿಯ, ಇಂಗ್ಲೆಂಡ್, ಭಾರತ, ನ್ಯೂಝಿಲ್ಯಾಂಡ್ , ಪಾಕಿಸ್ತಾನ, ವೆಸ್ಟ್ ಇಂಡೀಸ್, ಶ್ರೀಲಂಕಾ, ಝಿಂಬಾಬ್ವೆ, ದಕ್ಷಿಣ ಆಫ್ರಿಕ, ಬಾಂಗ್ಲಾದೇಶ, ಕೀನ್ಯ, ಸ್ಕಾಟ್ಲೆಂಡ್ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ ಟೂರ್ನಮೆಂಟ್‌ನಲ್ಲಿ ಅಗ್ರ ಮೂರು ತಂಡಗಳು ಸೂಪರ್ ಹಂತಕ್ಕೆ ತಲುಪುವ ನಿಯಮವನ್ನು ಜಾರಿಗೊಳಿಸಲಾಗಿತ್ತು. ಹಿಂದಿನ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನದ ಮೂಲಕ ಪ್ರಶಸ್ತಿ ಬಾಚಿಕೊಂಡಿದ್ದ ಶ್ರೀಲಂಕಾ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ಹುಮ್ಮಸ್ಸಿನಲ್ಲಿ ಟೂರ್ನಿ ಪ್ರವೇಶಿಸಿತ್ತು. ಆದರೆ ಶ್ರೀಲಂಕಾ ತಂಡಕ್ಕೆ ಸೂಪರ್ ಸಿಕ್ಸ್ ಹಂತಕ್ಕೂ ತಲುಪಲು ಸಾಧ್ಯವಾಗದೆ ಟೂರ್ನಿಯಿಂದ ಗ್ರೂಪ್ ಹಂತದಲ್ಲೇ ನಿರ್ಗಮಿಸಿತ್ತು. ಮೇ. 14ರಂದು ಶ್ರೀಲಂಕಾ ತಂಡ ಲಾರ್ಡ್ಸ್‌ನಲ್ಲಿ ತಾನು ಎದುರಿಸಿದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಸೋಲು ಅನುಭವಿಸಿತ್ತು.ಬಳಿಕ ಅದು ಚೇತರಿಸಿಕೊಳ್ಳಲಿಲ್ಲ.

ಗೆಲ್ಲುವ ಕುದುರೆಗಳೆಂದು ಬಿಂಬಿಸಲ್ಪಟ್ಟ ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕ, ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡ ವಿಫಲವಾಗಿದ್ದವು.ಭಾರತ ಮತ್ತೊಮ್ಮೆ ಎಡವಿತ್ತು. ಝಿಂಬಾಬ್ವೆ ವಿರುದ್ಧ ಮೂರು ರನ್‌ನಿಂದ ಸೋತಾಗ ಭಾರತದ ಅಭಿಮಾನಿಗಳಿಗೆ ತೀವ್ರ ನಿರಾಸೆ ಉಂಟಾಗಿತ್ತು. ಭಾರತದ ಸಚಿನ್ ತೆಂಡುಲ್ಕರ್ ಈ ಟೂರ್ನಿಯಲ್ಲಿ ಮಿಂಚಿದರು. ಟೂರ್ನಿ ನಡೆಯುತ್ತಿರುವಾಗ ಸಚಿನ್ ತೆಂಡುಲ್ಕರ್ ತಂದೆ ನಿಧನರಾದರು. ಇದರಿಂದ ಭಾರತಕ್ಕೆ ಮರಳಿದ ಸಚಿನ್ ತಂದೆಯ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮುಗಿಸಿ ವಿಶ್ವಕಪ್ ಟೂರ್ನಿಗೆ ಹಾಜರಾದರು. ಕೀನ್ಯದ ವಿರುದ್ಧ ಶತಕ ಬಾರಿಸಿ ತಂದೆಗೆ ಸಮರ್ಪಿಸಿದ್ದರು. ದ್ರಾವಿಡ್ ಮತ್ತು ತೆಂಡುಲ್ಕರ್ ಶತಕದ ನೆರವಿನಿಂದ ಭಾರತ 2 ವಿಕೆಟ್ ನಷ್ಟದಲ್ಲಿ 329 ರನ್ ಗಳಿಸಿತ್ತು. ಈ ಪಂದ್ಯದಲ್ಲಿ ಭಾರತ 94 ರನ್‌ಗಳ ಜಯ ಗಳಿಸಿತ್ತು. ತೆಂಡುಲ್ಕರ್ ಅನುಪಸ್ಥಿತಿಯಲ್ಲಿ ಆಡಿದ ಝಿಂಬಾಬ್ವೆ ವಿರುದ್ಧದ ಪಂದ್ಯವನ್ನು ಭಾರತ ಕಳೆದುಕೊಂಡಿತ್ತು.ಟೂರ್ನಿಯಲ್ಲಿ ಮಹಾನ್ ಗೋಡೆ ಖ್ಯಾತಿಯ ಕಲಾತ್ಮಕ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್ ಈ ಟೂರ್ನಿಯಲ್ಲಿ ಗರಿಷ್ಠ (461)ರನ್ ಸಂಪಾದಿಸಿ ಗಮನ ಸೆಳೆದರೂ ಲ್ಯಾನ್ಸ್ ಕ್ಲೂಸ್ನರ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆಯುವಲ್ಲಿ ಯಶಸ್ವಿಯಾದರು.

  ಗ್ರೂಪ್ ಹಂತದಲ್ಲಿ ಆಸ್ಟ್ರೇಲಿಯ ತಂಡ ಪಾಕಿಸ್ತಾನ ಮತ್ತು ನ್ಯೂಝಿಲ್ಯಾಂಡ್ ವಿರುದ್ಧ ಸೋತರೂ ಬಳಿಕ ಅದು ಚೇತರಿಸಿಕೊಂಡು ಪ್ರಶಸ್ತಿ ಎತ್ತಿದ್ದು ಈಗ ಇತಿಹಾಸ. ಬಾಂಗ್ಲಾದೇಶ ತಂಡ ಪಾಕಿಸ್ತಾನವನ್ನು ಸೋಲಿಸಿ ಆಘಾತವನ್ನುಂಟು ಮಾಡಿತ್ತು.ವಕಾರ್ ಯೂನಿಸ್ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಪಾಕ್‌ನ ಗೆಲುವಿನ ಗುರಿಯನ್ನು ಬೆಂಬತ್ತಲು ಭಾರೀ ಸಾಹಸ ನಡೆಸಿದರೂ ಫಲಕಾರಿಯಾಗಲಿಲ್ಲ. ಭಾರತ ಸೂಪರ್‌ಸಿಕ್ಸ್‌ನಲ್ಲಿ 6ನೇ ಸ್ಥಾನದೊಂದಿಗೆ ಅಭಿಯಾನ ಕೊನೆಗೊಳಿಸಿತ್ತು.

ಸೆಮಿಫೈನಲ್‌ನಲ್ಲಿ ನ್ಯೂಝಿಲ್ಯಾಂಡ್‌ನ್ನು ಪಾಕಿಸ್ತಾನ ಸೋಲಿಸಿ ಫೈನಲ್‌ಗೇರಿತ್ತು. ದಕ್ಷಿಣ ಆಫ್ರಿಕ ಮತ್ತು ಆಸ್ಟ್ರೇಲಿಯ ತಂಡಗಳ ನಡುವಿನ ಇನ್ನೊಂದು ಸೆಮಿಫೈನಲ್ ಪಂದ್ಯ ಟೈ ಆಗಿತ್ತು. ಆದರೆ ಆಸ್ಟ್ರೇಲಿಯ ತಂಡ ಸೂಪರ್ ಸಿಕ್ಸ್ ಹಂತದಲ್ಲಿ ಉತ್ತಮ ರನ್‌ರೇಟ್ ಗಳಿಸಿದ ಹಿನ್ನೆಲೆಯಲ್ಲಿ ಫೈನಲ್ ಪ್ರವೇಶಿಸಿತು. ಆಫ್ರಿಕ ತಂಡಕ್ಕೆ ಮತ್ತೊಮ್ಮೆ ಅದೃಷ್ಟ ಕೈಕೊಟ್ಟಿತು. ಫೈನಲ್ ಸಮರ

ಲಾರ್ಡ್ಸ್‌ನಲ್ಲಿ 1999ರ ಜೂನ್ 20ರಂದು ನಡೆದ ಏಳನೇ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯ ತಂಡ ಪಾಕಿಸ್ತಾನವನ್ನು 8 ವಿಕೆಟ್‌ಗಳಿಂದ ಮಣಿಸಿ 12 ವರ್ಷಗಳ ಬಳಿಕ ಮತ್ತೊಮ್ಮೆ ವಿಶ್ವಚಾಂಪಿಯನ್ ಆಗಿ ಮೂಡಿ ಬಂದಿತು. ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಇದು ಆಸ್ಟ್ರೇಲಿಯಕ್ಕೆ ವರದಾನವಾಗಿ ಪರಿಣಮಿಸಿತ್ತು.

ಪಾಕ್ ತಂಡ ಶೇನ್ ವಾರ್ನ್, ಮೆಕ್‌ಗ್ರಾತ್, ಟಾಮ್ ಮೋಡಿ ದಾಳಿಗೆ ತತ್ತರಿಸಿ 39 ಓವರ್‌ಗಳಲ್ಲಿ 132 ರನ್‌ಗಳಿಗೆ ಆಲೌಟಾಗಿತ್ತು. ಪಾಕ್ ಪರ ಇಝಾದ್ ಅಹ್ಮದ್ ಗರಿಷ್ಠ ರನ್ (22) ದಾಖಲಿಸಿದ್ದರು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯ ವಿಕೆಟ್ ಕೀಪರ್ ಆ್ಯಡಮ್ ಗಿಲ್‌ಕ್ರಿಸ್ಟ್ ಅರ್ಧಶತಕ 54 ರನ್ ಮತ್ತು ಸ್ಟೀವ್ ವಾ 37ರನ್ ದಾಖಲಿಸಿ ತಂಡಕ್ಕೆ ಸುಲಭದ ಜಯ ದೊರಕಿಸಿಕೊಟ್ಟರು. ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನವಿತ್ತ ಶೇನ್ ವಾರ್ನ್(33ಕ್ಕೆ 4) ಪಂದ್ಯ ಶ್ರೇಷ್ಠ ಪ್ರಶಸ್ತಿ ಗಿಟ್ಟಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News