ಇಟಾಲಿಯನ್ ಓಪನ್: ರೋಜರ್ ಫೆಡರರ್ ಔಟ್

Update: 2019-05-18 03:07 GMT

ರೋಮ್, ಮೇ 17: ವಿಶ್ವದ ನಂ.3ನೇ ಆಟಗಾರ ರೋಜರ್ ಫೆಡರರ್ ಶುಕ್ರವಾರ ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಡುವ ಮೊದಲೇ ಇಟಾಲಿಯನ್ ಓಪನ್ ಟೆನಿಸ್ ಟೂರ್ನಮೆಂಟ್‌ನಿಂದ ಹೊರಗುಳಿದಿದ್ದಾರೆ. ನಾಲ್ಕು ಬಾರಿ ಇಟಾಲಿಯನ್ ಓಪನ್ ಪ್ರಶಸ್ತಿ ಜಯಿಸಿರುವ ಫೆಡರರ್ ಬಲಗಾಲಿನ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಟೂರ್ನಿಯ ಅಂತಿಮ-8ರ ಪಂದ್ಯ ಆಡದೇ ಹಿಂದೆ ಸರಿದಿದ್ದಾರೆ. ಸ್ವಿಸ್ ಸೂಪರ್‌ಸ್ಟಾರ್ ಫೆಡರರ್ ಸೆಮಿ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಲು ಗ್ರೀಕ್‌ನ 8ನೇ ಶ್ರೇಯಾಂಕದ ಸ್ಟೆಫನೊಸ್ ಸಿಟ್‌ಸಿಪಾಸ್‌ರನ್ನು ಎದುರಿಸಬೇಕಾಗಿತ್ತು. 20 ಬಾರಿ ಗ್ರಾನ್‌ಸ್ಲಾಮ್ ಚಾಂಪಿಯನ್ ಆಗಿರುವ ಫೆಡರರ್ ಫ್ರೆಂಚ್ ಓಪನ್‌ಗೆ ತಯಾರಿ ನಡೆಸುವ ಉದ್ದೇಶದಿಂದ ಇಟಾಲಿಯನ್ ಓಪನ್‌ನಲ್ಲಿ ಆಡಿದ್ದರು. 2015ರ ಬಳಿಕ ಮೊದಲ ಬಾರಿ ಫ್ರೆಂಚ್ ಓಪನ್‌ನಲ್ಲಿ ಫೆಡರರ್ ಆಡಲು ಬಯಸಿದ್ದಾರೆ. ಮಳೆಯಿಂದಾಗಿ ವಿಳಂಬವಾದ ಎರಡು ಪಂದ್ಯಗಳಲ್ಲಿ ಭಾಗವಹಿಸಲು ಫೆಡರರ್ ಗುರುವಾರ ಸುಮಾರು 4 ಗಂಟೆಗಳ ಕಾಲ ಟೆನಿಸ್ ಕೋರ್ಟ್‌ನಲ್ಲಿದ್ದರು. 37ರ ಹರೆಯದ ಫೆಡರರ್ ಎರಡನೇ ಸುತ್ತಿನಲ್ಲಿ ಪೋರ್ಚುಗಲ್‌ನ ಜೊಯಾ ಸೌಸಾರನ್ನು ಸುಲಭವಾಗಿ ಮಣಿಸಿದರೆ, ಪ್ರಿ-ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಬೊರ್ನಾ ಕೊರಿಕ್‌ರನ್ನು 2-6, 6-4, 7-6(9/7)ಸೆಟ್‌ಗಳಿಂದ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದರು. ಫೆಡರರ್ ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ಸಿಟ್‌ಸಿಪಾಸ್ ಸೆಮಿ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ರಫೆಲ್ ನಡಾಲ್ ಅಥವಾ ಫೆರ್ನಾಂಡೊ ವೆರ್ಡಾಸ್ಕೊರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News