ಇಮಾಮ್‌ವುಲ್‌ಗೆ ಗಾಯದ ಭೀತಿ

Update: 2019-05-18 03:08 GMT

ನಾಟಿಂಗ್‌ಹ್ಯಾಮ್, ಮೇ 17: ವಿಶ್ವಕಪ್ ಆರಂಭವಾಗಲು ಇನ್ನು ಕೆಲವೇ ವಾರಗಳು ಬಾಕಿ ಇರುವಾಗ ಪಾಕಿಸ್ತಾನದ ದಾಂಡಿಗ ಇಮಾಮ್-ವುಲ್ ಹಕ್ ಗಾಯದ ಭೀತಿ ಎದುರಿಸುತ್ತಿದ್ದಾರೆ. ಶುಕ್ರವಾರ ನಡೆದ ಇಂಗ್ಲೆಂಡ್ ವಿರುದ್ಧದ 4ನೇ ಏಕದಿನ ಪಂದ್ಯದ ನಾಲ್ಕನೇ ಓವರ್‌ನಲ್ಲಿ ಇಂಗ್ಲೆಂಡ್‌ನ ವೇಗದ ಬೌಲರ್ ಮಾರ್ಕ್ ವುಡ್ ಎಸೆದ ಚೆಂಡು ಹಕ್ ಮೊಣಕೈಗೆ ಅಪ್ಪಳಿಸಿದೆ. ಆಗ ನೋವು ತಾಳಲಾರದೆ ಹಕ್ ಮೈದಾನದಲ್ಲಿ ಕುಳಿತುಕೊಂಡರು. ತಕ್ಷಣವೇ ಆಗಮಿಸಿದ ಫಿಸಿಯೋ ಕೆಲವು ನಿಮಿಷ ಚಿಕಿತ್ಸೆ ನೀಡಿ ಪಂದ್ಯದಿಂದ ನಿವೃತ್ತಿಯಾಗಲು ಸಲಹೆ ನೀಡಿದರು. ಹಕ್ ಗಾಯದ ಪ್ರಮಾಣ ಇನ್ನಷ್ಟೇ ಗೊತ್ತಾಗಲಿದೆ. ಮಂಗಳವಾರ 3ನೇ ಏಕದಿನ ಪಂದ್ಯದಲ್ಲಿ ಜೀವನಶ್ರೇಷ್ಠ 151 ರನ್ ಗಳಿಸಿದ್ದ ಹಕ್ ಅಜೇಯ 3 ರನ್ ಗಳಿಸಿದ್ದಾಗ ಗಾಯಗೊಂಡಿರುವುದು ವಿಶ್ವಕಪ್‌ಗೆ ಸಜ್ಜಾಗುತ್ತಿರುವ ಪಾಕ್‌ಗೆ ತೀವ್ರ ಹಿನ್ನಡೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News