​ಮಂಗಳಯಾನ ಬಳಿಕ ಇಸ್ರೋ ದೃಷ್ಟಿ ಎತ್ತ ಗೊತ್ತೇ?

Update: 2019-05-18 03:44 GMT

ಶ್ರೀಹರಿಕೋಟಾ, ಮೇ 18: ಮಂಗಳಯಾನ ಕೈಗೊಂಡ ಆರು ವರ್ಷಗಳ ಬಳಿಕ ಭಾರತ ಮುಂದಿನ ಹತ್ತು ವರ್ಷಗಳಲ್ಲಿ ಆರು ವೈಜ್ಞಾನಿಕ ಯಾನಗಳತ್ತ ದೃಷ್ಟಿ ನೆಟ್ಟಿದೆ. 2023ರಲ್ಲಿ ಶುಕ್ರಯಾನ ಕೈಗೊಳ್ಳಲು ಉದ್ದೇಶಿಸಲಾಗಿದೆ.

20ಕ್ಕಿಂತಲೂ ಹೆಚ್ಚು ಪೇಲೋಡ್‌ಗಳೊಂದಿಗೆ ಶುಕ್ರಗ್ರಹದತ್ತ ಯಾನ ಕೈಗೊಳ್ಳಲಿರುವ ಬಾಹ್ಯಾಕಾಶ ನೌಕೆ, ಮುಂದಿನ ದಶಕದಲ್ಲಿ ಅಂತರ ಗ್ರಹ ಮಿಷನ್ ಕೈಗೊಳ್ಳಲಿದೆ. 2020ರಲ್ಲಿ ಸೌರ ವಿಕಿರಣ ಅಧ್ಯಯನಕ್ಕೆ ಎಕ್ಸ್‌ಪೋಸ್ಯಾಟ್, 2021ರಲ್ಲಿ ಆದಿತ್ಯ ಎಲ್1 ಮೂಲಕ ಸೂರ್ಯನತ್ತ ಪಯಣ, 2022ರಲ್ಲಿ ಮಾರ್ಸ್ ಆರ್ಬಿಟ್ ಮಿಷನ್, 2024ರಲ್ಲಿ ಚಂದ್ರನ ಧ್ರುವಗಳ ಬಗ್ಗೆ ಅಧ್ಯಯನಕ್ಕೆ ಚಂದ್ರಯಾನ-3 ಹಾಗೂ ಅಂತಿಮವಾಗಿ ಸೌರ ವ್ಯವಸ್ಥೆಯಾಚೆಗಿನ ಅಧ್ಯಯನಕ್ಕೆ 2028ರಲ್ಲಿ ಎಕ್ಸೋವರ್ಲ್ಡ್ಸ್ ಯಾನಕ್ಕೆ ಇಸ್ರೊ ಸಿದ್ಧತೆ ಆರಂಭಿಸಿದೆ.

ದ್ರವ್ಯರಾಶಿ, ಗಾತ್ರ, ಸಂಯೋಜನೆ, ದಟ್ಟಣೆ ಹಾಗೂ ಗುರುತ್ವಾಕರ್ಷಣೆ ಹೀಗೆ ಎಲ್ಲ ಆಯಾಮಗಳಲ್ಲೂ ಭೂಮಿಯ ಅವಳಿ ಸಹೋದರಿ ಎಂದು ಶುಕ್ರಗ್ರಹವನ್ನು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರಗ್ರಹ ಯಾನದ ವೇಳೆ, ಈ ಗ್ರಹದ ಮೇಲ್ಮೈ ಹಾಗೂ ಉಪ ಮೇಲ್ಮೈ, ವಾತಾವರಣದ ರಾಸಾಯನಿಕ ಅಂಶಗಳು ಮತ್ತು ಸೌರ ವಿಕಿರಣ ಮತ್ತು ಸೌರಗಾಳಿಯ ಜತೆಗಿನ ಸ್ಪಂದನ ಬಗ್ಗೆ ಅಧ್ಯಯನ ನಡೆಸಲಿದೆ.

ಈ ಶುಕ್ರಯಾನ ಹಲವು ಮಂದಿಯಲ್ಲಿ ರೋಮಾಂಚನ ಮೂಡಿಸಿದೆ. "ವಿಶ್ವದ ವಿವಿಧೆಡೆಗಳಿಂದ ಉದ್ದೇಶಿತ ಯಾನಕ್ಕೆ ಅದ್ಭುತ ಸ್ಪಂದನ ಸಿಕ್ಕಿದೆ. 20ಕ್ಕೂ ಹೆಚ್ಚು ಪೇಲೋಡ್ ಒಯ್ಯಲು ನಿರ್ಧರಿಸಲಾಗಿದೆ" ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ. ಯುವಿಕಾ-2019 ಯುವ ವಿಜ್ಞಾನಿ ಯೋಜನೆಯಡಿ 108 ಶಾಲಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲು ಆಗಮಿಸಿದ್ದ ಅವರು ಈ ವಿಚಾರಗಳನ್ನು ಬಹಿರಂಗಪಡಿಸಿದರು.

ಆದಿತ್ಯ ಎಲ್1 ಹಾಗೂ ಎಕ್ಸ್‌ಪೋ ಸ್ಯಾಟ್ ಮಿಷನ್‌ಗಳನ್ನು ಈಗಾಗಲೇ ವ್ಯಾಖ್ಯಾನಿಸಲಾಗಿದೆ. ಉಳಿದವು ಯೋಜನೆಯ ವಿವಿಧ ಹಂತಗಳಲ್ಲಿವೆ ಎಂದು ಅವರು ಸ್ಪಷ್ಟಪಡಿಸಿದರು. ಆದಿತ್ಯ ಎಲ್1, ಹವಾಮಾನ ಬದಲಾವಣೆಯನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಭೂಮಿಯ ಮೇಲೆ ಅದರ ಪರಿಣಾಮವನ್ನು ಅಂದಾಜಿಸುವಲ್ಲಿ ಪ್ರಧಾನ ಪಾತ್ರ ವಹಿಸಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News