ಮೋದಿ ಅಧಿಕಾರಕ್ಕೆ ಬಂದರೆ ಗಾಂಧಿ ಪುತ್ಥಳಿ ಸ್ಥಳದಲ್ಲಿ ಗೋಡ್ಸೆ ಪ್ರತಿಮೆ: ದಿನೇಶ್ ಗುಂಡೂರಾವ್

Update: 2019-05-18 12:56 GMT

ಬೆಂಗಳೂರು, ಮೇ 18: ‘ಮೋದಿ ಇನ್ನೂ ಐದು ವರ್ಷ ಪ್ರಧಾನಿಯಾದರೆ, ದೇಶದಲ್ಲಿ ಎಲ್ಲಿಯೂ ರಾಷ್ಟ್ರಪಿತ ಮಹಾತ್ಮಗಾಂಧಿ ಪ್ರತಿಮೆಗಳು ಇರುವುದಿಲ್ಲ. ಬದಲಿಗೆ ಗಾಂಧಿ ಪುತ್ಥಳಿಗಳಿದ್ದ ಸ್ಥಳದಲ್ಲಿ ಗೋಡ್ಸೆ ಪ್ರತಿಮೆಗಳನ್ನು ಅನಾವರಣ ಮಾಡುತ್ತಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಶನಿವಾರ ಆನಂದ್ ರಾವ್ ವೃತ್ತದಲ್ಲಿನ ಗಾಂಧಿ ಪುತ್ಥಳಿಯ ಬಳಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಕೊಂದ ‘ಗೋಡ್ಸೆ ದೇಶಭಕ್ತ’ ಎಂಬ ಬಿಜೆಪಿ ಸಂಸದ ಹೇಳಿಕೆ ಖಂಡಿಸಿ ಕೆಪಿಸಿಸಿ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗೋಡ್ಸೆ ಸಮರ್ಥಿಸಿದ ಬಿಜೆಪಿ ಮುಖಂಡರನ್ನು ಉಚ್ಚಾಟನೆ ಮಾಡಬೇಕೆಂದು ಆಗ್ರಹಿಸಿದರು.

ಮೋದಿ ಗಾಂಧಿ ವಿರುದ್ಧ ಹೇಳಿಕೆ ನೀಡಿದ ‘ಸಾದ್ವಿ ಪ್ರಜ್ಞಾಸಿಂಗ್ ಅವರನ್ನು ಕ್ಷಮಿಸುತ್ತೇನೆ’ ಅಂದರೆ ಸಾಲದು. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನೀವೊಬ್ಬ ಡೋಂಗಿ ಪ್ರಧಾನಿ ಎಂಬುದು ದೇಶಕ್ಕೆ ಗೊತ್ತಾಗಲಿದೆ ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯವರು ದೇಶದಲ್ಲಿಂದು ಏನು ಮಾಡುತ್ತಿದ್ದಾರೆ. ಅವರು ದೇಶಕ್ಕಾಗಿ ಅವರೇನು ಮಾಡಿದ್ದಾರೆಂದು ತೋರಿಸಿದರೆ ರಾಜಕೀಯ ನಿವೃತ್ತಿ ಪಡೆಯುವೆ ಎಂದು ಸವಾಲು ಹಾಕಿದ ಅವರು, ಸ್ವಾತಂತ್ರದ ಅರ್ಥವೇ ಬಿಜೆಪಿಯವರಿಗೆ ಗೊತ್ತಿಲ್ಲ ಎಂದು ಟೀಕಿಸಿದರು.

ಜನರ ಭಾವನೆಗಳನ್ನು ಕೆರಳಿಸಿ ಅಧಿಕಾರಕ್ಕೆ ಬಂದ ಬಿಜೆಪಿ, ಜನಸಾಮಾನ್ಯರಿಗೆ ಏನು ಮಾಡಲಿಲ್ಲ. ಬದಲಿಗೆ ಬಹಳ ಹಿಂದೆಯೇ ಇಮೇಲ್, ಡಿಜಿಟಲ್ ಕ್ಯಾಮರಾ ಬಳಸಿದ್ದೆ ಎಂದು ಸುಳ್ಳು ಹಬ್ಬಿಸುತ್ತಿದ್ದಾರೆ. ಬಾಲಾಕೋಟ್ ದಾಳಿಯ ಬಗ್ಗೆಯೂ ಹಸಿಸುಳ್ಳುಗಳನ್ನು ಹೇಳುತ್ತಿದ್ದಾರೆಂದು ಲೇವಡಿ ಮಾಡಿದರು.

ಸಾದ್ವಿ ಪ್ರಜ್ಞಾ ಭಯೋತ್ಪಾದಕಿ: ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ರಿಝ್ವನ್ ಅರ್ಶದ್, ಹೆಣ್ಣು ಮಕ್ಕಳನ್ನು ಗೌರವಿಸುತ್ತವೆ ಎಂದು ಹೇಳುವ ಬಿಜೆಪಿ ಮುಖಂಡರಾದ ಸಾದ್ವಿ ಪ್ರಜ್ಞಾಸಿಂಗ್ ಓರ್ವ ಭಯೋತ್ಪಾದಕಿ. ಹೀಗಾಗಿಯೇ ಮಹಾತ್ಮ ಗಾಂಧಿ ಕೊಂದ ಗೋಡ್ಸೆಯನ್ನು ದೇಶಭಕ್ತ ಎಂಬ ಹೇಳಿಕೆ ನೀಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಆರೆಸೆಸ್ಸ್, ಬಿಜೆಪಿಯವರೆಲ್ಲರೂ ಗೋಡ್ಸೆ ಸಮರ್ಥನೆ ಮಾಡುವವರೇ. ಈ ಹೇಳಿಕೆ ನೀಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೇಲೆ ಮೊಕದ್ದಮೆ ಹಾಕಿದ್ದಾರೆ. ನನ್ನ ಮೇಲೆಯೂ ಕೇಸು ಹಾಕಲಿ ಎಂದು ಸವಾಲು ಹಾಕಿದ ಅವರು, ಆರೆಸೆಸ್ಸ್, ಬಿಜೆಪಿ ಪರಿವಾರದವರು ಮಹಾತ್ಮ ಗಾಂಧಿ ವಿರೋಧಿಗಳು ಎಂದು ಜರಿದರು.

ಆರೆಸೆಸ್ಸ್ ಕಚೇರಿಗಳಲ್ಲಿ ಅಷ್ಟೇ ಗೋಡ್ಸೆ ದೇಶಭಕ್ತ ಎಂದು ಹೇಳುತ್ತಿದ್ದರು. ಇದೀಗ ಗಾಂಧಿ ದೇಶವನ್ನು ಹಾಳು ಮಾಡಿದರು ಎಂದು ಹೇಳುತ್ತಿದ್ದು, ಆ ಮೂಲಕ ದೇಶ ಒಡೆಯುವ ಕೃತ್ಯಕ್ಕೆ ಬಿಜೆಪಿ ಮುಂದಾಗಿದೆ. ಗೋಡ್ಸೆ ಸಮರ್ಥನೆ ಮಾಡಿದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

‘ಗೋಡ್ಸೆ ಒಬ್ಬ ಹಿಂದೂ ಉಗ್ರ ಎಂಬ ನಟ ಕಮಲ್ ಹಾಸನ್ ಹೇಳಿಕೆಯಲ್ಲಿ ತಪ್ಪೇನೂ ಇಲ್ಲ. ಅವರು ಗೋಡ್ಸೆ ಬಗ್ಗೆ ತಿಳಿದೇ ಆ ಹೇಳಿಕೆ ನೀಡಿದ್ದಾರೆ’

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News