ಲೋಕಸಭಾ ಚುನಾವಣಾ ಫಲಿತಾಂಶ ಹಿನ್ನೆಲೆ: ಮೇ 23 ರಂದು ರಾಜ್ಯ ರಾಜಧಾನಿಯಲ್ಲಿ ನಿಷೇಧಾಜ್ಞೆ

Update: 2019-05-18 13:01 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 18: ಲೋಕಸಭಾ ಚುನಾವಣಾ ಫಲಿತಾಂಶ ಮೇ 23ರಂದು ಪ್ರಕಟಗೊಳ್ಳಲಿದ್ದು, ಮುಂಜಾಗೃತ ಕ್ರಮವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತ ಕ್ರಮವಾಗಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಮತ ಎಣಿಕೆ ನಡೆಯುವ ಮೇ 23ರಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಚುನಾವಣಾ ಫಲಿತಾಂಶ ಬಂದ ಬಳಿಕ ಗೆದ್ದ ಖುಷಿಯಲ್ಲಿ, ನಿಷೇಧಾಜ್ಞೆ ಜಾರಿಯಲ್ಲಿರುವ ಸಮಯದಲ್ಲಿ ಯಾವುದೇ ಸಭೆ ಅಥವಾ ಮೆರವಣಿಗೆಯನ್ನು ಮಾಡುವಂತಿಲ್ಲ. ಪಟಾಕಿ ಸಿಡಿಸುವಂತಿಲ್ಲ, ಬಿತ್ತಿ ಪತ್ರ ಪ್ರದರ್ಶಿಸುವಂತಿಲ್ಲ ಎಂದು ಆದೇಶಿಸಲಾಗಿದೆ.

ಅರಮನೆ ರಸ್ತೆಯ ಮೌಂಟ್ ಕಾರ್ಮಲ್ ಕಾಲೇಜು, ವಿಠಲ್ ಮಲ್ಯ ರಸ್ತೆಯ ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಹಾಗೂ ಜಯನಗರದ 4ನೇ ಬ್ಲಾಕ್‌ನ ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದ್ದು ಅಲ್ಲಿನ ಭದ್ರತೆಯನ್ನು ಹೆಚ್ಚಿಸಿ ಹಿರಿಯ ಅಧಿಕಾರಿಗಳು ನಿಗಾ ವಹಿಸಿದ್ದಾರೆ. ನಿಷೇದಾಜ್ಞೆ ಜಾರಿಯ ವೇಳೆ 5 ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು, ಮೆರವಣಿಗೆ ಮತ್ತು ಸಭೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ.

ಆದರೆ ಶವಸಂಸ್ಕಾರ ಮತ್ತು ಮದುವೆ ಮೆರವಣಿಗೆಗಳಿಗೆ ಈ ನಿಷೇಧ ಅನ್ವಯವಾಗುವುದಿಲ್ಲ. ಶಸ್ತ್ರಗಳು, ದೊಣ್ಣೆಗಳು, ಕತ್ತಿ, ಈಟಿ, ಗದೆ ಮುಂತಾದ ಮಾರಕಾಸ್ತ್ರಗಳನ್ನು ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಯಾವುದೇ ವಸ್ತುಗಳನ್ನು ಒಯ್ಯುವಂತಿಲ್ಲ. ಯಾವುದೇ ಸಂರಕ್ಷಾರ್ಹ ಪದಾರ್ಥ ಅಥವಾ ಸ್ಫೋಟಕ ವಸ್ತುಗಳನ್ನು ಸಿಡಿಸುವುದು, ಕಲ್ಲು ಹಾಗೂ ಕ್ಷಿಪಣಿಗಳನ್ನು ಎಸೆಯುವ ಸಾಧನಗಳು ಅಥವಾ ಉಪಕರಣಗಳ ಒಯ್ಯುವಿಕೆ, ಶೇಖರಣೆ ನಿಷೇಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News