ಲೋಕಸಭಾ ಚುನಾವಣೆಯ ವೇಳೆ ಸಂವಿಧಾನದ ಆಶಯಕ್ಕೆ ಧಕ್ಕೆಯಾಗಿದೆ: ವಾಟಾಳ್ ನಾಗರಾಜ್

Update: 2019-05-18 14:12 GMT

ಬೆಂಗಳೂರು, ಮೇ 18: ರಾಜ್ಯ ಹಾಗೂ ದೇಶದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸಂವಿಧಾನದ ಆಶಯಗಳು ಉಲ್ಲಂಘನೆಯಾಗಿದೆ. ಕೇವಲ ಭ್ರಷ್ಟಾಚಾರ, ಕೋಮುವಾದವೆ ವಿಜೃಂಭಿಸಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ.

ಲೋಕಸಭಾ ಚುನಾವಣೆಯ ವೇಳೆ ನಡೆದ ಭ್ರಷ್ಟಾಚಾರ, ಸುಳ್ಳು ಮಾಹಿತಿಗಳ ರವಾನೆ ಹಾಗೂ ಆರೋಪಗಳು, ಜಾತಿ ಲೆಕ್ಕಾಚಾರವನ್ನು ಖಂಡಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕರಾಳ ಚುನಾವಣಾ ಭೂತವನ್ನು ಸುಟ್ಟು ಪ್ರತಿಭಟಿಸಲಾಯಿತು.

ಈ ವೇಳೆ ಮಾತನಾಡಿದ ಅವರು, ದೇಶದ ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಹಣದ ಹೊಳೆ ಹರಿದಿದೆ. ಜನ ನಾಯಕರೆಂದು ಕರೆಯಲ್ಪಟ್ಟವರೆ ಜಾತಿ ಲೆಕ್ಕಾಚಾರದಲ್ಲಿ ಮತಗಳನ್ನು ವಿಂಗಡಿಸಿ ಭೇದ ಭಾವ ಮಾಡಿದ್ದಾರೆ. ಇದು ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಆಶಯಕ್ಕೆ ವಿರೋಧಿಯಾದದ್ದೆಂದು ವಿಷಾದಿಸಿದರು.

ಚುನಾವಣಾ ಆಯೋಗ ವಿಧಿಸುತ್ತಿರುವ ಯಾವುದೇ ಕಾನೂನುಗಳಿಗೂ ಬೆಲೆ ಇಲ್ಲವಾಗಿದೆ. ಚುನಾವಣಾ ಆಯೋಗ ನಿಗದಿಪಡಿಸಿರುವ ಹಣಕ್ಕೂ 100ಪಟ್ಟು ಹೆಚ್ಚು ಹಣ ಖರ್ಚು ಮಾಡಲಾಗಿದೆ. ಓಟುಗಳನ್ನು ಪಡೆಯಲಿಕ್ಕಾಗಿ ಎಲ್ಲ ರೀತಿಯ ಅವ್ಯವಹಾರಗಳು ನಡೆದಿವೆ. ಇದರಿಂದ ಚುನಾವಣಾ ವ್ಯವಸ್ಥೆಯ ಮೇಲೆ ಜನ ವಿಶ್ವಾಸ ಕಳೆದುಕೊಳ್ಳುವ ಅಪಾಯವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಪ್ರತಿ ಚುನಾವಣೆಯಲ್ಲೂ ಸಾವಿರಾರು ಕೋಟಿ ರೂ.ಜನರ ತೆರಿಗೆ ಹಣ ವ್ಯಯವಾಗುತ್ತಿದೆ. ಆದರೆ, ಇದರಿಂದ ಯಾವುದೆ ಪ್ರಯೋಜನ ಆಗುತ್ತಿಲ್ಲ. ಹೀಗಾಗಿ ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ಕಠಿಣ ಕ್ರಮ ಕೈಗೊಳ್ಳದೆ ಹೋದರೆ ಇಂತಹ ಚುನಾವಣೆಗಳಿಂದ ದೇಶ ಅಪಾಯಕ್ಕೆ ಸಿಲುಕಲಿದೆ ಎಂಬುದರಲ್ಲಿ ಸಂದೇಹವಿಲ್ಲ. ಮುಂದಿನ ದಿನಗಳಲ್ಲಾದರೂ ಈ ವ್ಯವಸ್ಥೆ ಬದಲಾಗಬಹುದೆಂಬ ಆಶಯ ನನ್ನದಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News