ಸಮನ್ವಯ ಸಮಿತಿಗೆ ಸೇರಲು ವಿಶ್ವನಾಥ್ ಮನವಿ ಸಲ್ಲಿಸಲಿ: ಕೃಷ್ಣಭೈರೇಗೌಡ

Update: 2019-05-18 14:22 GMT

ಬೆಂಗಳೂರು, ಮೇ 18: ರಾಜ್ಯ ಸರಕಾರದ ಸಮನ್ವಯ ಸಮಿತಿಗೆ ಸೇರ್ಪಡೆಯಾಗಲು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಅವರ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರಿಗೆ ಮನವಿ ಸಲ್ಲಿಸಲಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮನ್ವಯ ಸಮಿತಿಯಲ್ಲಿ ಯಾರು ಇರಬೇಕು ಎಂಬುದನ್ನು ಜೆಡಿಎಸ್ ವರಿಷ್ಠ ದೇವೇಗೌಡ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ. ಬೇರೆಯವರಿಗೆ ಅವಕಾಶ ಇಲ್ಲವೆಂದಲ್ಲ ಎಂದರು.

ಸಮನ್ವಯ ಸಮಿತಿಗೆ ಸೇರಲು ಬಯಸಿದರೆ ವಿಶ್ವನಾಥ್, ದೇವೇಗೌಡರಿಗೆ ಮನವಿ ಸಲ್ಲಿಸಲಿ, ಎರಡೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಒಪ್ಪಿದರೆ, ನಮ್ಮ ಅಭ್ಯಂತರವೇನು ಇರೋದಿಲ್ಲ. ಈಗ ಸ್ವಲ್ಪ ಗೊಂದಲಗಳು ಇರುವುದು ನಿಜ. ಅದನ್ನು ಬಗೆಹರಿಸಲು ಉಭಯ ಪಕ್ಷಗಳ ವರಿಷ್ಠರು ಪ್ರಯತ್ನಿಸುತ್ತಿದ್ದಾರೆ. ಈ ಗೊಂದಲಗಳಿಂದ ಸರಕಾರದ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲ ಎಂದು ಕೃಷ್ಣಭೈರೇಗೌಡ ತಿಳಿಸಿದರು.

ವಿಧಾನಸಭೆ ವಿರ್ಸಜಿಸಿ ಚುನಾವಣೆಗೆ ಹೋಗುವಂತೆ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ನೀಡಿರುವ ಹೇಳಿಕೆಗೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಸಂಬಂಧ ನಾನು ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಅದು ಅವರ ವೈಯಕ್ತಿಕ ಹೇಳಿಕೆ ಎಂದರು.

ನಾವು ಸರಕಾರ ನಡೆಸುತ್ತಿದ್ದೇವೆ. ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ. ಚುನಾವಣೆ ಬಂದಾಗ ಎಲ್ಲರೂ ಎದುರಿಸಬೇಕಾಗುತ್ತದೆ. ಆದರೆ, ಈಗ ನನಗೆ ಚುನಾವಣೆ ಪ್ರಶ್ನೆ ಇಲ್ಲ. ನಾನು ಶಾಸಕನಾಗಿ, ಸಚಿವನಾಗಿ ನನ್ನ ಕೆಲಸ ಮಾಡುತ್ತಿದ್ದೇನೆ. ಅದು ನನ್ನ ಜವಾಬ್ದಾರಿ ಎಂದು ಕೃಷ್ಣ ಭೈರೇಗೌಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News