ಉದ್ಯೋಗದಲ್ಲಿ ಕಡ್ಡಾಯವಾಗಿ ಕನ್ನಡಿಗರಿಗೆ ಮೀಸಲಾತಿ ನೀಡಬೇಕು: ಕನ್ನಡ ಪರ ಸಂಘಟನೆಗಳ ಎಚ್ಚರಿಕೆ

Update: 2019-05-18 14:38 GMT

ಬೆಂಗಳೂರು, ಮೇ 18: ರಾಜ್ಯದಲ್ಲಿ ಸೃಷ್ಟಿಯಾಗುತ್ತಿರುವ ಉದ್ಯೋಗಗಳಲ್ಲಿ ಕಡ್ಡಾಯವಾಗಿ ಕನ್ನಡಿಗರಿಗೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಣಧೀರ ಪಡೆ, ಕರುನಾಡ ಸೇವಕರು ಸೇರಿದಂತೆ ಇತರ ಕನ್ನಡ ಪರ ಸಂಘಟನೆಗಳು ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ರಚಿಸುವ ಮೂಲಕ ಸರಕಾರಕ್ಕೆ ಎಚ್ಚರಿಕೆ ರವಾನಿಸಿದರು.

ರಾಜ್ಯದ ಯುವಜನತೆ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಗತ್ಯಕ್ಕೆ ಅನುಗುಣವಾಗಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಲಭ್ಯವಿರುವ ಉದ್ಯೋಗಗಳು ಪರಭಾಷಿಕರ ಪಾಲಾಗುತ್ತಿವೆ. ನಗರದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಕನ್ನಡಿಗರಿಗೆ ಹುದ್ದೆ ನೀಡಲು ಹಿಂದೇಟು ಹಾಕುತ್ತಿವೆ. ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಸಂಘಟನೆಗಳು ತಿಳಿಸಿವೆ.

ಈ ನಿಟ್ಟಿನಲ್ಲಿ ನಮ್ಮ ನೆಲೆದಲ್ಲಿ ಸೃಷ್ಟಿಯಾಗುವ ಉದ್ಯೋಗಗಳು ಕನ್ನಡಿಗರಿಗೆ ಮೀಸಲಾಗಿರಬೇಕು. ಖಾಸಗಿ ವಲಯದ ಉದ್ಯಮಗಳಿಗೆ ಸರಕಾರ ಮೂಲಭೂತ ಸೌಲಭ್ಯ ನೀಡುತ್ತಿರುವುದರಿಂದ ಸರೋಜಿನಿ ಮಹಿಷಿ ವರದಿಯನ್ವಯ ಸಿ ಮತ್ತು ಡಿ ಹುದ್ದೆಗಳಲ್ಲಿ ಶೇ.100 ರಷ್ಟು ಹಾಗೂ ಉನ್ನತ ಹುದ್ದೆಗಳಲ್ಲಿ ಶೇ.80 ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಬೇಕೆಂದು ಆಗ್ರಹಿಸಿದರು.

ಈ ಸಂಬಂಧ ಸರಕಾರ ಉದ್ಯಮಿಗಳಿಗೆ ಪೂರ್ವ ಷರತ್ತು ವಿಧಿಸಬೇಕು. ರಾಜ್ಯದ ಕಾಲೇಜುಗಳ ಮೂಲಕ ಕ್ಯಾಂಪಸ್ ನೇಮಕಾತಿಗೆ ಸೂಚಿಸಬೇಕು. ಮಹಾರಾಷ್ಟ್ರ ಮಾದರಿಯಂತೆ ರಾಜ್ಯ ಸರಕಾರ ಸ್ಥಳೀಯರಿಗೆ ನಿಗದಿಪಡಿಸಿದ ಪ್ರಮಾಣದಲ್ಲಿ ಉದ್ಯೋಗ ಒದಗಿಸಬೇಕು. ಅಲ್ಲದೆ, ಅಭ್ಯರ್ಥಿಗಳು ಸ್ಥಳೀಯರೆಂದು ಪರಿಗಣಿಸಲು ರಾಜ್ಯದಲ್ಲಿ ಕನಿಷ್ಠ 15 ವರ್ಷ ವಾಸ ಮಾಡಿರಬೇಕು. ಕನ್ನಡ ಓದಲು ಮತ್ತು ಬರೆಯಲು ಬರಬೇಕೆಂದು ಷರತ್ತು ವಿಧಿಸಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News