ಆರ್ಥಿಕ ಸಂಕಷ್ಟದಲ್ಲಿ ವಕ್ಫ್ ಸಂಸ್ಥೆ ಮದಾರಿಸ್-ಉನ್-ನಿಸ್ವಾನ್

Update: 2019-05-18 14:41 GMT

ಬೆಂಗಳೂರು, ಮೇ 18: ಬೆಂಗಳೂರಿನ ಹೃದಯ ಭಾಗ ಶಿವಾಜಿನಗರದಲ್ಲಿರುವ 110 ವರ್ಷಗಳ ಐತಿಹಾಸಿಕ, ವಕ್ಫ್ ಬೋರ್ಡ್ ಅಧೀನದಲ್ಲಿರುವ ಶಿಕ್ಷಣ ಸಂಸ್ಥೆ ಅಂಜುಮನ್-ಎ-ಇಸ್ಲಾಮಿಯಾ ಮದಾರಿಸ್-ಉನ್-ನಿಸ್ವಾನ್, ಆದಾಯದ ಮೂಲವಿದ್ದರೂ ಆರ್ಥಿಕ ಸಂಕಷ್ಟವನ್ನು ಎದುರಿಸುವ ಪರಿಸ್ಥಿತಿಗೆ ತಲುಪಿದೆ.

ಮುಸ್ಲಿಮ್ ಸಮುದಾಯದ ಹೆಣ್ಣು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸಮುದಾಯದ ಹಿರಿಯರು 110 ವರ್ಷಗಳ ಹಿಂದೆ ಈ ಶೈಕ್ಷಣಿಕ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದರು. ಇಲ್ಲಿ ಹೆಣ್ಣು ಮಕ್ಕಳಿಗಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜು ನಡೆಸಲಾಗುತ್ತಿದೆ. ಶಿಕ್ಷಣ ಸಂಸ್ಥೆಯ ಖರ್ಚು ವೆಚ್ಚಗಳನ್ನು ನಿರ್ವಹಿಸಲು 32 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ಆದರೆ, ಈ ವಾಣಿಜ್ಯ ಮಳಿಗೆಗಳಲ್ಲಿ ಬಾಡಿಗೆ ಇರುವವರಿಂದ ನಿರೀಕ್ಷಿತ ಸಹಕಾರ ಲಭ್ಯವಾಗದೆ, ಆದಾಯದ ಪ್ರಮಾಣವು ಗಣನೀಯವಾಗಿ ಕುಸಿದಿದೆ. ಇದರಿಂದಾಗಿ, ಶಿಕ್ಷಣ ಸಂಸ್ಥೆಯನ್ನು ನಡೆಸಲು ಆಡಳಿತ ಸಮಿತಿಯು ಪರದಾಡುವಂತಾಗಿದೆ.

ಶಿಕ್ಷಣ ಸಂಸ್ಥೆಯ ಮನವಿ ಮೇರೆಗೆ ಬೆಂಗಳೂರು ನಗರ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಸಯ್ಯದ್ ಶುಜಾವುದ್ದೀನ್ ನೇತೃತ್ವದ ನಿಯೋಗವು, ಇಂದು ಸಂಸ್ಥೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೆ, ಆಡಳಿತ ಸಮಿತಿಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಿತು.

ಈ ಶೈಕ್ಷಣಿಕ ಸಂಸ್ಥೆಗೆ ಸೇರಿದ ಒಂದು ಎಕರೆ 30 ಗುಂಟೆ ಜಮೀನು ಇದೆ. 32 ಅಂಗಡಿಗಳಿಂದ ಮಾಸಿಕ ಕೇವಲ 70 ಸಾವಿರ ರೂ.ಆದಾಯ ಬರುತ್ತಿದೆ. ಶಾಲೆ ಹಾಗೂ ಕಾಲೇಜಿನ ಸಿಬ್ಬಂದಿಗಳಿಗೆ ಮಾಸಿಕ ವೇತನ ಪಾವತಿಸಲು 1.70 ಲಕ್ಷ ರೂ.ಗಳ ಅಗತ್ಯವಿದೆ ಎಂದು ಸಭೆಯ ಬಳಿಕ ಸಯ್ಯದ್ ಶುಜಾವುದ್ದೀನ್ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

ಈ ಅಂಗಡಿಗಳ ಮಾಲಕರು ನಿಯಮಿತವಾಗಿ ಬಾಡಿಗೆ ಪಾವತಿ ಮಾಡುತ್ತಿಲ್ಲ. ಇನ್ನು ಕೆಲವರು ತಮಗೆ ಹಂಚಿಕೆಯಾಗಿರುವ ಅಂಗಡಿಯನ್ನು ಕಾನೂನು ಬಾಹಿರವಾಗಿ ಬೇರೆಯವರಿಗೆ ತಮಗೆ 'ಸಬ್ ಲೀಸ್'ಗೆ ನೀಡಿ ಮಾಸಿಕ 15-20 ಸಾವಿರ ರೂ.ಪಡೆಯುತ್ತಿದ್ದಾರೆ. ಆದರೆ, ಸಂಸ್ಥೆಗೆ ಮಾತ್ರ 6 ಸಾವಿರ ರೂ.ಗಳನ್ನು ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

ನೂತನ ವಕ್ಫ್ ಕಾಯ್ದೆ ಅನ್ವಯ ಮಾರುಕಟ್ಟೆ ದರದ ಆಧಾರದಲ್ಲಿ ಬಾಡಿಗೆ ಪಾವತಿಸುವಂತೆ ಎಲ್ಲ ಅಂಗಡಿ ಮಾಲಕರಿಗೆ ನೋಟಿಸ್ ಜಾರಿ ಮಾಡಿ, ಎರಡು ತಿಂಗಳು ಕಾಲಾವಕಾಶ ನೀಡುವಂತೆ ಸಂಸ್ಥೆಯ ಆಡಳಿತ ಸಮಿತಿಗೆ ಸೂಚನೆ ನೀಡಿದ್ದೇನೆ. ಯಾರು ಮಾರುಕಟ್ಟೆ ದರದ ಆಧಾರದಲ್ಲಿ ಬಾಡಿಗೆ ನೀಡಲು ಒಪ್ಪುವುದಿಲ್ಲವೋ ಅಂತಹವರನ್ನು ಕಾನೂನು ಪ್ರಕಾರ ಅಂಗಡಿ ಖಾಲಿ ಮಾಡಿಸುವಂತೆ ತಿಳಿಸಿದ್ದೇನೆ ಎಂದು ಶುಜಾವುದ್ದೀನ್ ತಿಳಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಶೀಘ್ರದಲ್ಲೆ ಈ ಸಂಸ್ಥೆಗೆ ಭೇಟಿ ನೀಡಲಿದ್ದು, ಕಾಂಪೌಂಡ್ ಒಳಗೆ ಖಾಲಿ ಇರುವ ಜಾಗವನ್ನು ಅಭಿವೃದ್ಧಿಪಡಿಸುವ ಸಂಬಂಧ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ವಕ್ಫ್ ಅಧಿಕಾರಿ ಅಕ್ಬರ್, ಆಡಳಿತ ಸಮಿತಿಯ ಉಪಾಧ್ಯಕ್ಷೆ ಮುಬೀನಾ ಬೇಗಮ್, ಕಾರ್ಯದರ್ಶಿ ಸಯ್ಯದಾ ಗುಲ್ನಾಝ್ ಸೇರಿದಂತೆ ಆಡಳಿತ ಸಮಿತಿಯ ಇತರ ಸದಸ್ಯರು, ಬೆಂಗಳೂರು ಉತ್ತರ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News