ಪ್ರಾದೇಶಿಕ್ಷ ಪಕ್ಷಗಳ ಸಹಕಾರವಿಲ್ಲದೆ ಸರಕಾರ ರಚನೆ ಅಸಾಧ್ಯ: ಎಚ್.ಡಿ.ದೇವೇಗೌಡ

Update: 2019-05-18 16:39 GMT

ಬೆಂಗಳೂರು, ಮೇ 18: ಲೋಕಸಭಾ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿಗೆ ಯಾವುದೇ ಕಾರಣಕ್ಕೂ ಮತ್ತೆ ಬಹುಮತ ಬರುವುದಿಲ್ಲ. ಅದೇ ರೀತಿ, ಕಾಂಗ್ರೆಸ್ ಪಕ್ಷಕ್ಕೂ ಬಹುಮತ ಸಿಗುವುದಿಲ್ಲ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭವಿಷ್ಯ ನುಡಿದಿದ್ದಾರೆ.

ಶನಿವಾರ ಪದ್ಮನಾಭ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಅಭಿಮಾನಿಗಳು, ಕುಟುಂಬದ ಸದಸ್ಯರ ಜೊತೆ ಕೇಕ್ ಕತ್ತರಿಸುವ ಮೂಲಕ ತಮ್ಮ 87ನೇ ಹುಟ್ಟುಹಬ್ಬ ಆಚರಿಸಿಕೊಂಡ ಅವರು ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಷ್ಟ್ರೀಯ ಪಕ್ಷದವರು ಪ್ರಧಾನಿಯಾಗಬಹುದು. ಆದರೆ, ಪ್ರಾದೇಶಿಕ ಪಕ್ಷಗಳ ಸಹಕಾರವಿಲ್ಲದೆ ಯಾರೂ ಕೂಡ ಕೇಂದ್ರದಲ್ಲಿ ಸರಕಾರ ರಚನೆ ಮಾಡಲು ಸಾಧ್ಯವಿಲ್ಲ. ಆದುದರಿಂದ, ರಾಷ್ಟ್ರೀಯ ಪಕ್ಷಗಳಿಗೆ ಪ್ರಾದೇಶಿಕ ಪಕ್ಷಗಳ ಬೆಂಬಲ ಅಗತ್ಯ. ಇಲ್ಲದಿದ್ದರೆ, ಐಕ್ಯಮತ್ಯದ ಸರಕಾರ ರಚನೆ ಮಾಡುವುದು ಕಷ್ಟ ಎಂದು ಅವರು ಹೇಳಿದರು.

ಬಿಜೆಪಿ ಜೊತೆಯೂ ಕೆಲವು ಪ್ರಾದೇಶಿಕ ಪಕ್ಷಗಳು ಕೈ ಜೋಡಿಸಿವೆ. ಪ್ರಧಾನಿ ನರೇಂದ್ರಮೋದಿಯ ನಡವಳಿಕೆಯಿಂದ ದೇಶದ ಜನರು ಬೇಸತ್ತಿದ್ದಾರೆ. ಆದುದರಿಂದ, ಅವರು ಹೇಳಿದಂತೆ ಬಿಜೆಪಿಯವರು 300 ಸೀಟುಗಳನ್ನು ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ ಎಂದು ದೇವೇಗೌಡ ತಿಳಿಸಿದರು.

ವಿಧಾನಸಭೆ ವಿರ್ಸಜಿಸಿ ಚುನಾವಣೆಗೆ ಹೋಗುವುದು ಸೂಕ್ತ ಎಂದು ಜೆಡಿಎಸ್ ಹಿರಿಯ ನಾಯಕ ಬಸವರಾಜ ಹೊರಟ್ಟಿ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಮೈತ್ರಿ ಸರಕಾರದಲ್ಲಿ ಗೊಂದಲ ಇದ್ದೇ ಇದೆ ಎಂದರು.

ಯಾರು, ಯಾರು ಏನು ಮಾತನಾಡಿದರು ಎಂದು ಹೇಳಲು ಹೋಗುವುದಿಲ್ಲ. ಆದರೆ, ರಾಜ್ಯದಲ್ಲಿ ಮೈತ್ರಿ ಸರಕಾರ ಉಳಿಯುತ್ತದೆ. ಒಪ್ಪಂದದಂತೆ ಐದು ವರ್ಷ ಅಧಿಕಾರ ಪೂರೈಸಲಿದೆ. ಕಾಂಗ್ರೆಸ್ ನಾಯಕರಾದ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿಯ ಒಪ್ಪಿಗೆಯಿಂದ ಈ ಮೈತ್ರಿ ಆಗಿದೆ ಎಂದು ದೇವೇಗೌಡ ಹೇಳಿದರು.

ಕುಮಾರಸ್ವಾಮಿ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಲಿಖಿತವಾಗಿಯೇ ಕಾಂಗ್ರೆಸ್ ವರಿಷ್ಠರು ಬರೆದು ಕೊಟ್ಟಿದ್ದಾರೆ. ಆದುದರಿಂದ, ಈ ಸಂಬಂಧ ಯಾರಿಗೂ ಅನುಮಾನಗಳು ಬೇಡ ಎಂದು ದೇವೇಗೌಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News