×
Ad

ಸಾಹಿತಿಗಳು ಚಳವಳಿಗಳನ್ನು ರೂಪಿಸದಿದ್ದರೆ ಬದಲಾವಣೆ ಅಸಾಧ್ಯ: ಕುಂ.ವೀರಭದ್ರಪ್ಪ

Update: 2019-05-18 22:11 IST

ಬೆಂಗಳೂರು, ಮೇ 18: ಸಾಹಿತಿಗಳು ಚಳವಳಿಗಳನ್ನು ರೂಪಿಸದಿದ್ದರೆ ಬದಲಾವಣೆ ಅಸಾಧ್ಯ. ಇಂದು ಹೋರಾಟ, ಚಳವಳಿಗಳ ಅಗತ್ಯವಿದೆ. ಲೇಖಕರು ವಿಷಾದಕರ ಸ್ಥಿತಿಯಲ್ಲಿದ್ದು, ಇಂತಹ ಸನ್ನಿವೇಶದಲ್ಲಿ ಲೇಖಕರ ಸಾಮಾಜಿಕ ಜವಾಬ್ದಾರಿ ಹೆಚ್ಚಿದೆ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಅಭಿಪ್ರಾಯಪಟ್ಟರು.

ಶನಿವಾರ ನಗರದ ಗಾಂಧಿ ಭವನದಲ್ಲಿ ಸಪ್ನ ಬುಕ್ ಹೌಸ್ ಆಯೋಜಿಸಿದ್ದ ಕುಂ.ವೀರಭದ್ರಪ್ಪರವರ 20ನೆಯ ಕಾದಂಬರಿ ‘ಜೈ ಭಜರಂಗಬಲಿ’ಯ ಬಿಡುಗಡೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ 5 ವರ್ಷಗಳಲ್ಲಿ ಲೇಖಕರ ವಾಕ್ ಸ್ವಾತಂತ್ರವನ್ನು ಕಸಿದುಕೊಂಡಿದ್ದು, ಲೇಖಕರು ಅತ್ಯಂತ ಅಪಾಯದ ಸ್ಥಿತಿಯಲ್ಲಿದ್ದೇವೆ. ಯಾರಿಗೂ ಯಾವುದೇ ವಾಕ್ ಸ್ವಾತಂತ್ರ ಇಲ್ಲದಾಗಿದೆ. ಅಲ್ಲದೆ, ಸಾಹಿತಿಗಳು ಚಳವಳಿಗಳನ್ನು ರೂಪಿಸದಿದ್ದರೆ ಬದಲಾವಣೆ ಅಸಾಧ್ಯ. ಇಂದು ಹೋರಾಟ, ಚಳವಳಿಗಳ ಅಗತ್ಯವಿದೆ. ಲೇಖಕರು ವಿಷಾದಕರ ಸ್ಥಿತಿಯಲ್ಲಿದ್ದು, ಇಂತಹ ಸನ್ನಿವೇಶದಲ್ಲಿ ಲೇಖಕರ ಸಾಮಾಜಿಕ ಜವಾಬ್ದಾರಿ ಹೆಚ್ಚಿದೆ ಎಂದು ಹೇಳಿದರು.

ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಸಾಹಿತಿ ಸಿ.ಎನ್.ರಾಮಚಂದ್ರನ್, ಸಂವೇದನಾ ಶೀಲ ಲೇಖಕನಿಗೆ ಸಮಾಜದ ವ್ಯವಸ್ಥೆಯನ್ನು ಸರಿ ಪಡಿಸುವ ಹಕ್ಕಿದೆ, ಲೇಖಕನಾದವನು ಸಾಂವಿಧಾನಿಕ ಕೌಶಲ್ಯಗಳನ್ನು ಪ್ರದರ್ಶಿಸಿ, ಸಮಾಜದ ಎಲ್ಲ ಅವ್ಯವಸ್ಥೆಯನ್ನು ಬಯಲಿಗೆ ಎಳೆಯಬೇಕಾಗುತ್ತದೆ. ಅಂದರೆ ಸಾಂವಿಧಾನಿಕ ಕೌಶಲ್ಯ ಕಾದಂಬರಿಯಲ್ಲಿರಬೇಕಿದೆ. ಹೀಗಾಗಿ, ಕುಂ.ವೀ ಲೇಖಕ ಹಾಗೂ ಪ್ರಜಾಪ್ರಭುತ್ವದ ನಡುವಿನ ಅಸಮಾನವನ್ನು ಎತ್ತಿ ತೋರಿಸಿದ್ದಾರೆ ಎಂದು ಹೇಳಿದರು.

ಪ್ರೊ.ಬಸವರಾಜ ಕಲ್ಗುಡಿ ಮಾತನಾಡಿ, ಅತ್ಯಂತ ಅಪರೂಪದ ಕಾದಂಬರಿ ಇದಾಗಿದ್ದು, ಇವರ ಬರವಣಿಗೆಯಲ್ಲಿ ಅತ್ಯಂತ ಗಂಭೀರತೆ ಇದೆ. ಕನ್ನಡದ ಘನವಾದ ಕಾವ್ಯ ಎನ್ನಬಹುದಾಗಿದೆ. ಕಾದಂಬರಿಯಲ್ಲಿ ತಿಳಿ ಹಾಸ್ಯ, ವಿಷಾದ, ರಾಜಕಾರಣ ಎಡ-ಬಲ ಪಂಥೀಯರ ಅನೇಕ ಆಯಾಮಗಳನ್ನು ಕಟ್ಟಿಕೊಟ್ಟಿದ್ದಾರೆ. ಅಪರೂಪದ ವಿಡಂಬನಾತ್ಮಕತೆ ಈ ಕಾದಂಬರಿಯಲ್ಲಿದೆ ಎಂದು ವಿವರಿಸಿದರು.

ಲೇಖಕ ಎಸ್.ದಿವಾಕರ್ ಮಾತನಾಡಿ, ಕಾದಂಬರಿಯಲ್ಲಿ ಸಂಪೂರ್ಣ ಹೊಸತನವಿದ್ದು, ಬದುಕನ್ನು ಮೀರಿ ಕಾದಂಬರಿಯಲ್ಲಿ ಏನೋ ಇದೆ ಎನಿಸುತ್ತದೆ. ಇಂದು ವಾಸ್ತವ ಸಾಹಿತ್ಯ ಎಲ್ಲರನ್ನೂ ಮುಟ್ಟುತ್ತಿಲ್ಲ. ಕೃತಿಯಲ್ಲಿ ವ್ಯಂಗ್ಯವನ್ನು ಅತ್ಯಂತ ಶಕ್ತಿಶಾಲಿಯಾಗಿ ಬಳಸಿದ್ದಾರೆ. ತೀರಾ ಸಾಮಾನ್ಯವಾದುದ್ದನ್ನೂ ಅದ್ಭುತವಾಗಿ ರಚಿಸಿದ್ದಾರೆ. ಇವರ ಕೃತಿಯಲ್ಲಿ ಮನುಷ್ಯರು ಮಂಗಗಳಾಗಿ, ಮಂಗಗಳನ್ನು ಮನುಷ್ಯರನ್ನಾಗಿಸಿದ್ದಾರೆ. ಕಾದಂಬರಿ ಕೇವಲ ಮನರಂಜನೆ ಆಗದೆ ಮನುಷ್ಯನ ಪುನರ್ ವಿಮರ್ಶೆಯಾಗುತ್ತದೆ ಎಂದು ಹೇಳಿದರು.

ಜಾತಿ ವ್ಯವಸ್ಥೆ ಹಾಗೂ ಭಯೋತ್ಪಾದಕ ವ್ಯವಸ್ಥೆಯನ್ನು ಬಲಗೊಳಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹತಾಶ ಸ್ಥಿತಿಯಲ್ಲಿರಿಸಿ, ದೇಶದ ಮತದಾರರನ್ನು ಬಿಕಿನಿ ಮಾಡಿ ಹರಾಜು ಹಾಕುತ್ತಿದ್ದಾರೆ.

-ಕುಂ ವೀರಭದ್ರಪ್ಪ, ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News