ಖಾಲಿ ನಿವೇಶನಗಳ ಕಸ ಸ್ವಚ್ಛಗೊಳಿಸದಿದ್ದರೆ ಮಾಲಕರಿಗೆ 1 ಲಕ್ಷ ರೂ. ದಂಡ

Update: 2019-05-18 16:43 GMT

ಬೆಂಗಳೂರು, ಮೇ 18: ಖಾಲಿ ನಿವೇಶನಕ್ಕೆ ಕಸ ಸುರಿಯದಂತೆ ತಡೆಯಲು ಸೂಚನಾ ಲಕಗಳನ್ನು ಲಗತ್ತಿಸಬೇಕು. 15 ದಿನದೊಳಗೆ ಖಾಲಿ ನಿವೇಶನಗಳಲ್ಲಿರುವ ಕಸ ಸ್ವಚ್ಛಗೊಳಿಸದಿದ್ದರೆ ದಂಡ ಕಟ್ಟಬೇಕಾಗುತ್ತದೆ ಎಂದು ಖಾಲಿ ನಿವೇಶನಗಳ ಮಾಲಕರಿಗೆ ಬಿಬಿಎಂಪಿ ನೋಟಿಸ್ ಜಾರಿಗೊಳಿಸಿದೆ.

ನಗರದ ರಸ್ತೆಗಳು, ರಾಜಕಾಲುವೆಯಲ್ಲಿ ಕಸ ಹೆಚ್ಚುತ್ತಿರುವುದಲ್ಲದೇ ಖಾಲಿ ಸೈಟ್‌ಗಳಲ್ಲಿ ಕೂಡ ರಾಶಿ ಕಸ ಬೀಳುತ್ತಿದ್ದು, ನಿವೇಶನಗಳ ಮಾಲಕರೇ ತಮ್ಮ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇಲ್ಲದಿದ್ದರೆ 25 ಸಾವಿರದಿಂದ 1 ಲಕ್ಷ ರೂ. ವರೆಗೆ ದಂಡ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 2,98 ಲಕ್ಷ ಖಾಲಿ ನಿವೇಶನಗಳಿದ್ದು, ಇದರ ಮಾಲಕರು ಖರೀದಿ ಮಾಡಿದ ಬಳಿಕ ಮನೆ, ಕಾಂಪ್ಲೆಕ್ಸ್‌ಗಳನ್ನು ಕಟ್ಟಿಲ್ಲ. ಖಾಲಿ ನಿವೇಶನದ ಸುತ್ತಿಲಿನ ಜನರು, ಅಂಗಡಿಯವರು ಕಸ ಸುರಿಯುತ್ತಿದ್ದು, ಮಳೆಯಾಗುವ ಹಿನ್ನಲೆ ಕಸದಿಂದ ದುರ್ವಾಸನೆ, ಸ್ಥಳೀಯ ಜನರಿಗೆ ಅನಾರೋಗ್ಯದ ಸಮಸ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಹಸಿರು ನ್ಯಾಯಾಧಿಕರಣ ಪೀಠ (ಎನ್‌ಜಿಟಿ) ನಿರ್ದೇಶನದಂತೆ ರಾಜ್ಯ ಮಟ್ಟದ ಸಮಿತಿಯು ಕೈಗೊಂಡ ಸಭೆಯಲ್ಲಿ ಸಾರ್ವಜನಿಕರು ತ್ಯಾಜ್ಯ ನಿರ್ವಹಣೆಯ ತಮ್ಮ ಜವಾಬ್ದಾರಿ ಅರಿತು ಕಸವಿಲೇವಾರಿ ಮಾಡಬೇಕು. ಇಲ್ಲದಿದ್ದರೆ ಹೆಚ್ಚಿನ ಮೊತ್ತದ ದಂಡ ವಿಧಿಸಬೇಕು. ಕಾನೂನಿನಡಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದೆ.

ಫಲಕ ಅಳವಡಿಸಲು ಸೂಚನೆ: ಎನ್‌ಜಿಟಿ ಸೂಚನೆಯಿಂದ ಎಚ್ಚೆತ್ತ ಪಾಲಿಕೆ ಅಧಿಕಾರಿಗಳು ಖಾಲಿ ನಿವೇಶನ ಮಾಲಕರಿಗೆ ನೋಟಿಸ್ ನೀಡಿದ್ದು, 15 ದಿನಗಳಲ್ಲಿ ಕಸ ಸ್ವಚ್ಛಗೊಳಿಸಬೇಕು. ಕಸ ಹಾಕದಂತೆ ಲಕ ಅಳವಡಿಸುವುದು, ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದು, ಒಂದು ವೇಳೆ ಕಸ ಕಂಡುಬಂದರೆ ದೊಡ್ಡ ಮೊತ್ತದ ದಂಡಕ್ಕೆ ಸಿದ್ಧರಾಗಲು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News