ರಕ್ತಚಂದನ ಕಳ್ಳ ಸಾಗಾಟ: 13 ಆರೋಪಿಗಳ ಬಂಧನ

Update: 2019-05-18 16:45 GMT

ಬೆಂಗಳೂರು, ಮೇ 18: ರಕ್ತಚಂದನ ಕಳ್ಳ ಸಾಗಣೆ ಆರೋಪದ ಮೇಲೆ ಇಲ್ಲಿನ ಸಿಸಿಬಿ ಪೊಲೀಸರು 13 ಮಂದಿ ಅಂತರ್‌ರಾಷ್ಟ್ರೀಯ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 3.5 ಕೋಟಿ ರೂ.ಗಳಿಗೂ ಅಧಿಕ ಮೊತ್ತದ 4 ಸಾವಿರ ಕೆಜಿ ರಕ್ತಚಂದನ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ದಕ್ಷಿಣ ಕನ್ನಡದ ಪುತ್ತೂರು ಮೂಲದ ಅಬ್ದುಲ್ ರಶೀದ್ (48), ಬೆಂಗಳೂರು ಮೂಲದವರಾದ ಝುಬೇರ್ ಖಾನ್ (33), ಸಲೀಂ ಖಾನ್ (50) ತಾಹೀರ್ ಖಾನ್(25), ಬಾಷಾ(40), ಬಂಟ್ವಾಳ ಮೂಲದವರಾದ ಶಫೀ(30), ಮುನ್ನಾ(25), ಕೇರಳದ ನೌಷದ್ (27), ಸಿದ್ದಿಕ್(40), ಮಹಮ್ಮದ್ ಅನ್ವರ್(23), ಮುಬಾರಕ್ (26) ಆಲಿಖಾನ್(40)ಹಾಗೂ ಇಬ್ರಾಹೀಂ (28) ಎಂದು ಗುರುತಿಸಲಾಗಿದೆ.

ಆರೋಪಿಗಳು ಅಕ್ರಮವಾಗಿ ರಕ್ತಚಂದನ ಮರಗಳನ್ನು ಕಡಿದು, ಇಲ್ಲಿನ ಸುಬ್ರಹ್ಮಣ್ಯ ನಗರ, ಎಲೆಕ್ಟ್ರಾನಿಕ್ ಸಿಟಿ, ವಿನಾಯಕನಗರದ ವಿವಿಧೆಡೆಗಳಲ್ಲಿ ಗೋದಾಮುಗಳಲ್ಲಿ ದಾಸ್ತಾನು ಮಾಡಿ ಚನ್ನೈ, ಮುಂಬೈ ಹಾಗೂ ವಿದೇಶಗಳಿಗೆ ರಫ್ತು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರಕ್ತಚಂದನ ಸಾಗಾಣೆ ಯಾರಿಗೂ ಗೊತ್ತಾಗಬಾರದು ಎಂದು ಉನ್ನತ ದರ್ಜೆ ಪಾರ್ಸಲ್ ಪರಿಕರಗಳನ್ನು ಬಳಸಿ ರಕ್ತಚಂದನ ತುಂಡುಗಳನ್ನು ವಿವಿಧೆಡೆಗೆ ಕಳುಹಿಸುತ್ತಿದ್ದ ಅಂಶ ತನಿಖೆಯಿಂದ ಗೊತ್ತಾಗಿದೆ. ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News