ಕೆ.ಎಸ್.ನರಸಿಂಹಸ್ವಾಮಿಯ ಕಾವ್ಯ ರಚನೆ ನನ್ನ ಕೃತಿಗೆ ಪ್ರೇರಣೆ: ಸಾಹಿತಿ ಡಾ.ದೊಡ್ಡರಂಗೇಗೌಡ

Update: 2019-05-18 17:06 GMT

ಬೆಂಗಳೂರು, ಮೇ 18: ಕೆ.ಎಸ್.ನರಸಿಂಹಸ್ವಾಮಿ ಅವರ ಕಾವ್ಯ ರಚನೆ ಮತ್ತು ಡಿವಿಜಿಯವರ ಮಂಕುತ್ತಿಮ್ಮನ ಕಗ್ಗದ ಓದು ನಾನು ರಚಿಸಿರುವ ಚೌಪದಿ ಕೃತಿಗೆ ಪ್ರೇರಣೆಯಾಯಿತು ಎಂದು ಸಾಹಿತಿ ಡಾ.ದೊಡ್ಡರಂಗೇಗೌಡ ತಿಳಿಸಿದರು.

ಶನಿವಾರ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದ ದೊಡ್ಡರಂಗೇಗೌಡ ರಚಿಸಿರುವ ‘ಮಣ್ಣಿನ ಮಾತುಗಳು’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ದಿನಕರ ದೇಸಾಯಿಯವರ ಚೌಪದಿಗಳು ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದವು. ಅಲ್ಲದೆ, ಈ ಕೃತಿಯ ಚೌಪದಿಗಳು ಒಬ್ಬ ವ್ಯಕ್ತಿಯ ಅಭಿಪ್ರಾಯವಲ್ಲ. ಬದಲಾಗಿ, ನನ್ನ ಚೌಪದಿಗಳು ಗ್ರಾಮೀಣ ಜನಮನದ ಸೊಗಡುಗಳು ಎಂದು ನೆನೆದರು.

ಈ ಕೃತಿಯಲ್ಲಿ 900 ಚೌಪದಿಗಳಿವೆ. ಎಲ್ಲರಿಗೂ ಮಣ್ಣಿನ ಸಂಸರ್ಗ ಬೇಕಿದೆ. ವೈಟ್ ಕಾಲರ್ ವರ್ಕರ್ಸ್ ಕಾಲದಲ್ಲಿ ಮಣ್ಣಿನ ಸಂಬಂಧವನ್ನು ಕಳೆದುಕೊಂಡಿದ್ದು, ನನ್ನ ಚೌಪದಿಗಳು ಕವಿಯ ಕಾಣ್ಕೆಗಳು, ನನ್ನ ಅಂತರಂಗದ ತುಮುಲಗಳು ಎಂದು ವಿಶ್ಲೇಷಣೆ ಮಾಡಿದರು.

ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ.ಎಂ.ಎಚ್.ಕೃಷ್ಣಯ್ಯ ಮಾತನಾಡಿ, ಬುದ್ಧ ಬೋಧಿಸಿದ ಮಾತುಗಳೆಲ್ಲವೂ ಮಣ್ಣಿನ ಮಾತುಗಳಾಗಿದ್ದವು. ಆದರೆ, ದೊಡ್ಡ ರಂಗೇಗೌಡ ಅತ್ಯಂತ ಸಹಜ ಕವಿಯಾಗಿ ಅವರು ರಚಿಸುವ ಬರಹಗಳು ಕೃತಕವೆನಿಸುವುದಿಲ್ಲ ಎಂದು ನುಡಿದರು.

ಮನಸ್ಸಿನ ಸಹಜ ಮೂಲಗಳು ರಚಿತವಾಗುತ್ತವೆ. ಒಂದು ಕಾಲಾವಧಿಯ ಚಿಂತನೆಗಳ ಪ್ರಾತಿನಿಧಿಕ ಚೌಪದಿಗಳು ಇವು. ಆಯಾ ಕಾಲದಲ್ಲಿ ನಡೆದ ಆಗು ಹೋಗುಗಳಿಗೆ ಪ್ರತಿಕ್ರಿಯಾತ್ಮಕ ಪದಗಳು ಇದರಲ್ಲಿವೆ. ಹಾಡು- ನುಡಿಯ ಲಯವನ್ನು ಆಧರಿಸಿ ರಚಿಸಿದ್ದಾರೆ ಎಂದು ಕೃತಿ ಕುರಿತು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನುಬಳಿಗಾರ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಪ್ರೊ.ಬೈರಮಂಗಲ ರಾಮೇಗೌಡ, ನಿವೃತ್ತ ಐಎಎಸ್ ಅಧಿಕಾರಿ ಡಾ.ಸೋಮಶೇಖರ್ ಸೇರಿದಂತೆ ಪ್ರಮುಖರು ಕೃತಿ ಕುರಿತು ಮಾತನಾ ಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News